ಮಾದರಿ ಆಡಳಿತದ ದಿಕ್ಸೂಚಿ ನೀಡಿದ ಪೆರಿಯಾರ್: ಚಿಂತಕ ಡಾ.ಲೋಲಾಕ್ಷ

Update: 2019-09-17 17:15 GMT

ಬೆಂಗಳೂರು, ಸೆ.17: ಪೆರಿಯಾರ್ ರಾಮಸ್ವಾಮಿಯು ದೇಶದಲ್ಲಿ ಮಾದರಿ ರಾಜಕೀಯ ಆಡಳಿತದ ದಿಕ್ಸೂಚಿಯನ್ನು ಹಾಕಿಕೊಟ್ಟಿದ್ದಾರೆ ಎಂದು ಚಿಂತಕ ಡಾ.ಲೋಲಾಕ್ಷ ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರ ನಗರದ ಗಾಂಧಿ ಭವನದಲ್ಲಿ ವಿಚಾರವಾದಿಗಳ ವೇದಿಕೆ ವತಿಯಿಂದ ಆಯೋಜಿಸಿದ್ದ ಇ.ವಿ.ರಾಮಸ್ವಾಮಿ ಪೆರಿಯಾರ್ ಅವರ 140 ನೆ ಜಯಂತಿ ಹಾಗೂ ಪೆರಿಯಾರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪೆರಿಯಾರ್ ವೈಚಾರಿಕ ಪ್ರಜ್ಞೆ ಮೂಡಿಸುವುದಷ್ಟೇ ಅಲ್ಲದೆ, ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ವಿಚಾರಗಳ ಕುರಿತು ಸಾಕಷ್ಟು ಜಾಗೃತಿಯನ್ನುಂಟು ಮಾಡಿದ್ದಾರೆ. ಎಲ್ಲರಿಗೂ ಸಮಾನತೆ ಬೇಕು. ಸಂಪತ್ತು ಸಮಾನ ಹಂಚಿಕೆಯಾಗಬೇಕು, ಆಡಳಿತ ಎಲ್ಲರಿಗೂ ಸಿಗಬೇಕು ಎಂದು ಪ್ರತಿಪಾದಿಸಿದ್ದರು ಎಂದು ಹೇಳಿದರು.

ರಾಮಸ್ವಾಮಿಯು ಶೋಷಿತರಿಗೆ ಮೀಸಲಾತಿ ನೀಡಬೇಕು ಎಂದು ಪ್ರತಿಪಾದಿಸಿದರು. ಅದಕ್ಕಾಗಿ ಕಾಂಗ್ರೆಸ್‌ನಲ್ಲಿ ಸಕ್ರಿಯರಾಗಿದ್ದ ಅವರು, 1925 ರಲ್ಲಿ ಬಂಡಾಯವೆದ್ದು ಹೊರಬಂದರು. ಕಾನೂನು ಬದ್ಧ ಆಡಳಿತದ ಸಂಬಂಧ ಪೆರಿಯಾರ್‌ರ ಕೊಡುಗೆ ಹಲವು ಕೊಡುಗೆಗಳಿವೆ. ಸಂವಿಧಾನದಲ್ಲಿಯೂ ಪೆರಿಯಾರ್‌ರ ವಿಚಾರಗಳು ಸೇರ್ಪಡೆಯಾಗಿವೆ ಎಂದು ತಿಳಿಸಿದರು.

ಪೆರಿಯಾರ್ ಮಾನವೀಯತೆಯಿಲ್ಲದ, ಶೋಷಿತರನ್ನು ನಿರಾಕರಿಸಿದ್ದ ಚಿಂತನೆಗಳನ್ನು ತಿರಸ್ಕಾರ ಮಾಡಿದ್ದರು. ಅದಕ್ಕಾಗಿ ಅವರು ವಿಚಾರವಾದಿಯಾದರು ಎಂದ ಅವರು, ಬ್ರಾಹ್ಮಣ್ಯ ಸಿದ್ಧಾಂತ ಮೆರೆಯುತ್ತಿದ್ದ ಕಾಲಘಟ್ಟದಲ್ಲಿ, ಆ ಸಿದ್ಧಾಂತದ ವಿರುದ್ಧ ಬಂಡಾಯವೆದ್ದರು. ಮೌಢ್ಯ, ಜನವಿರೋಧಿ ನಡೆಗಳ ವಿರುದ್ಧ ಚಳವಳಿ ರೂಪಿಸಿದರು ಎಂದರು.

ಸಮಾಜದ ಎಲ್ಲ ಸಮುದಾಯಗಳನ್ನು ಒಟ್ಟಾಗಿ ಚಳವಳಿಯಲ್ಲಿ ತೊಡಗಿಸಿಕೊಳ್ಳಲು ನಿರಂತರ ಪ್ರಯತ್ನ ಮಾಡುತ್ತಿದ್ದರು. ಅವರ ಆಶಯಗಳು ಸಫಲವಾಗಬೇಕಾದರೆ ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಚಳವಳಿ ಕಟ್ಟಬೇಕಿದೆ. ಧರ್ಮದ ನಶೆ ಏರಿಸಿಕೊಂಡು ಸುತ್ತಾಡುತ್ತಿರುವ ಸಂದರ್ಭದಲ್ಲಿ ಪ್ರಜಾಪ್ರಭುತ್ವ ಉಳಿವಿಗಾಗಿ ಎಲ್ಲರೂ ಒಟ್ಟುಗೂಡಿ ಸಮ ಸಮಾಜ ಕಟ್ಟಬೇಕಿದೆ ಎಂದು ಅವರು ನುಡಿದರು.

ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಮಾತನಾಡಿ, ದೇಶದಲ್ಲಿ ಉದ್ಯಮ ನಡೆಸಬೇಕು, ಹಣ ಸಂಪಾದನೆ ಮಾಡಬೇಕು ಎಂದರೆ ಒಂದೊಂದು ದೇವಸ್ಥಾನ ನಿರ್ಮಾಣ ಮಾಡಿಕೊಂಡರೆ ಸಾಕಿದೆ. ಜನರನ್ನಿಂದು ದೇವರು, ಧರ್ಮದ ಹೆಸರಿನಲ್ಲಿ ಸುಲಿಗೆ ಮಾಡಲಾಗುತ್ತಿದೆ ಎಂದು ಹೇಳಿದರು.

ಪೆರಿಯಾರ್ ರಾಮಸ್ವಾಮಿಯು ಎಲ್ಲರಿಗೂ ದೇವಾಲಯಗಳಿಗೆ ಪ್ರವೇಶ ನೀಡಬೇಕು, ಬಾಲ್ಯವಿವಾಹ ರದ್ದು ಮಾಡಬೇಕು, ವಿಧವಾ ವಿವಾಹಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಬಂಡಾಯವೆದ್ದು ಹೋರಾಟ ಮಾಡಿದ್ದಾರೆ. ಅವರು ಏಕಾಏಕಿ ವಿಚಾರವಾದಿಯಾಗಲಿಲ್ಲ, ಅವರಲ್ಲಿದ್ದ ಆಕ್ರೋಶವೇ ವಿಚಾರವಂತರನ್ನಾಗಿ ಮಾಡಿತು ಎಂದು ಲಲಿತಾ ನಾಯಕ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕಿ ಸಮತಾ ದೇಶಮಾನೆ, ಬಿ.ಟಿ.ಲಲಿತಾ ನಾಯಕ್, ಮಾನವ ಬಂಧುತ್ವ ವೇದಿಕೆ ಸಂಚಾಲಕ ರವೀಂದ್ರ ನಾಯ್ಕರ್, ದಲಿತ ಮುಖಂಡ ಜಿಗಣಿ ಶಂಕರ್‌ಗೆ ಪೆರಿಯಾರ್ ಪ್ರಶಸ್ತಿ ನೀಡಿ, ಗೌರವಿಸಲಾಯಿತು. ಈ ವೇಳೆ ಸಮತಾ ಸೈನಿಕ ದಳದ ಅಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ, ವಕೀಲ ಅನಂತ್ ನಾಯಕ್, ದಲಿತ ಸಂಘಟನೆಯ ಅಶ್ವತ್ಥ್ ನಾರಾಯಣ ಸೇರಿದಂತೆ ಹಲವರಿದ್ದರು.

ಸಂಸದ ನಾರಾಯಣಸ್ವಾಮಿಯನ್ನು ದಲಿತ ಎಂಬ ಕಾರಣಕ್ಕೆ ಗ್ರಾಮ ಪ್ರವೇಶ ನಿರಾಕರಣೆ ಮಾಡಿದ್ದು ಸರಿಯಲ್ಲ. ಇದು ಕಾನೂನಿನ ಉಲ್ಲಂಘನೆಯಾಗಿದೆ. ಪೊಲೀಸರು ತಪ್ಪು ಮಾಡಿದವರ ಮೇಲೆ ಕ್ರಮ ಕೈಗೊಳ್ಳಬೇಕಿತ್ತು. ಹೋರಾಟಗಾರರೆಲ್ಲರೂ, ಇದನ್ನು ಖಂಡಿಸಲೇಬೇಕು. ಇದರ ವಿರುದ್ಧ ಪಕ್ಷ ಮರೆತು ಬೀದಿಗಿಳಿಯಬೇಕು.

-ಬಿ.ಟಿ.ಲಲಿತಾ ನಾಯಕ್, ಮಾಜಿ ಸಚಿವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News