ಮೊದಲ ಹಂತದ ಉಪ ನಗರ ರೈಲು ಸೇವೆ ಶೀಘ್ರ ಆರಂಭ ?

Update: 2019-09-17 17:34 GMT

ಬೆಂಗಳೂರು, ಸೆ.17: ಸಿಲಿಕಾನ್ ಸಿಟಿಯಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ರೂಪಿಸಲಾಗಿರುವ ಉಪ ನಗರ ರೈಲು ಯೋಜನೆಯ ಮೊದಲನೇ ಹಂತದ ಕಾಮಗಾರಿ ಶೀಘ್ರ ಆರಂಭಿಸಲು ಚಿಂತನೆ ನಡೆಸಲಾಗಿದ್ದು, ಎರಡು ಮಾರ್ಗದಲ್ಲಿ ದ್ವಿಪಥ ನಿರ್ಮಾಣಕ್ಕೆ ಕೆ-ರೈಡ್ ಸಂಸ್ಥೆಗೆ ವಹಿಸಲಾಗಿದೆ.

ಮುಂಬೈ ನಗರ ಸ್ಥಳೀಯ ರೈಲು ಸಂಪರ್ಕ ಮಾದರಿಯಲ್ಲಿ ಉಪ ನಗರ ರೈಲುಯೋಜನೆ ಜಾರಿ ಮಾಡಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ರೈಟ್ಸ್ ಸಂಸ್ಥೆ ಈಗಾಗಲೇ ವಿಸ್ತೃತ ಯೋಜನಾ ವರದಿ(ಡಿಪಿಆರ್) ಸಿದ್ಧಪಡಿಸಿ ಸಲ್ಲಿಕೆ ಮಾಡಿದೆ. ಅದರಲ್ಲಿ 53 ನಿಲ್ದಾಣಗಳನ್ನು ಹೊಸದಾಗಿ ನಿರ್ಮಾಣ ಮಾಡಲು ಪ್ರಸ್ತಾಪ ಮಾಡಲಾಗಿದೆ.

ಅದರ ಜತೆಗೆ 101 ಕಿ.ಮೀ.ಉದ್ದದ ಹೊಸ ಹಾಗೂ ಹಾಲಿ ಇರುವ ಮಾರ್ಗಗಳನ್ನು ವಿಸ್ತರಿಸಬೇಕಿದೆ. ಇಲಾಖೆಯ ನಿರೀಕ್ಷೆಯಂತೆ 161 ಕಿ.ಮೀ.ನಷ್ಟು ಸಂಪರ್ಕ ಏರ್ಪಡಲಿದ್ದು, 60 ಕಿ.ಮೀ.ಎಲಿವೇಟೆಡ್ ಮಾರ್ಗ ಮತ್ತು 101 ಕಿ.ಮೀ. ನೆಲಮಟ್ಟದ ಮಾರ್ಗ ನಿರ್ಮಾಣ ವಾಗಲಿದೆ ಅಥವಾ ಹಳೆ ಮಾರ್ಗಗಳನ್ನೇ ಅಭಿವೃದ್ಧಿ ಮಾಡಿಸಬೇಕಿದೆ. ಅದರಲ್ಲಿ ಹಾಲಿ ಇರುವ 48 ಕಿ.ಮೀ. ಬೈಯಪ್ಪನಹಳ್ಳಿ-ಹೊಸೂರು ಮತ್ತು 21 ಕಿ.ಮೀ.ಯಶವಂತಪುರ-ಚನ್ನಸಂದ್ರ ಮಾರ್ಗವನ್ನು ದ್ವಿಪಥವಾಗಿಸಲಾಗುತ್ತಿದೆ.

ಈ ಕಾಮಗಾರಿಯನ್ನು ಕೆ.ರೈಡ್ ಸಂಸ್ಥೆಗೆ ವಹಿಸಲಾಗಿದ್ದು, ಭೂ ಸ್ವಾಧೀನ, ದ್ವಿಪಥ ಮಾರ್ಗ ನಿರ್ಮಾಣ ಸೇರಿದಂತೆ ಮತ್ತಿತರೆ ಕಾಮಗಾರಿಗಳನ್ನು ಸಂಸ್ಥೆ ಮಾಡಬೇಕಿದೆ. ಆ ಸಂಬಂಧ ರೈಲ್ವೆ ಮಂಡಳಿ ಆದೇಶ ಹೊರಡಿಸಿದೆ. ದ್ವಿಪಥದ ಕಾಮಗಾರಿ ಪೂರ್ಣವಾದ ಬಳಿಕ ಅಲ್ಲಿ ಉಪ ನಗರ ರೈಲು ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.

ಎಲ್ಲೆಲ್ಲಿ ಕಾರಿಡಾರ್ ನಿರ್ಮಾಣ: ಯೋಜನೆಯಂತೆ ಕೆಂಗೇರಿ-ವೈಟ್‌ಫೀಲ್ಡ್, ಬೆಂಗಳೂರು ನಗರ ನಿಲ್ದಾಣ-ರಾಜಾನುಕುಂಟೆ, ನೆಲಮಂಗಲ-ಬೈಯಪ್ಪನಹಳ್ಳಿ ಮತ್ತು ಬೊಮ್ಮಸಂದ್ರ-ದೇವನಹಳ್ಳಿ ಕಾರಿಡಾರ್ ನಿರ್ಮಿಸಲಾಗುತ್ತದೆ. ಜತೆಗೆ ಯೋಜನೆಗಾಗಿ ಒಟ್ಟು 53 ನಿಲ್ದಾಣಗಳನ್ನು ಹೊಸದಾಗಿ ನಿರ್ಮಿಸಬೇಕಿದೆ. ಉಳಿದಂತೆ ಹಾಲಿಯಿರುವ 29 ನಿಲ್ದಾಣಗಳು ಯೋಜನೆ ವ್ಯಾಪ್ತಿಗೆ ಬರಲಿವೆ ಎಂದು ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News