ರೈತರ ಸಮಸ್ಯೆ ಈಡೇರದೆ ದೇಶ ಅಭಿವೃದ್ಧಿಯಾಗದು: ಮಾಜಿ ಶಾಸಕ ಮಹಿಮಾ ಪಟೇಲ್

Update: 2019-09-18 05:36 GMT

ಬೆಂಗಳೂರು, ಸೆ.17: ಸರಕಾರ ರೈತರ ಸಮಸ್ಯೆಗಳ ಕಡೆ ಗಮನಹರಿಸದೇ ಹೋದರೆ ದೇಶದ ಅಭಿವೃದ್ಧಿ ಕುಂಠಿತವಾಗಲಿದೆ ಎಂದು ಮಾಜಿ ಶಾಸಕ ಮಹಿಮಾ ಪಟೇಲ್ ಎಚ್ಚರಿಸಿದ್ದಾರೆ. 

ಮಂಗಳವಾರ ಯಶವಂತಪುರ ಎಪಿಎಂಸಿ ಆವರಣದಲ್ಲಿ ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಒಕ್ಕೂಟದ ಸಮಿತಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಈರುಳ್ಳಿ ಸೇರಿದಂತೆ ಇನ್ನಿತರೆ ಬೆಳೆಗಳನ್ನು ಬೆಳೆೆದಿರುವ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಅವರ ಸಂಕಷ್ಟಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ತುರ್ತು ಅಗತ್ಯವಿದೆ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಚಾಮರಸಮಾಲಿ ಪಾಟೀಲ್ ಮಾತನಾಡಿ, ಕೇವಲ ಐಟಿ ಬಿಟಿ ಅಭಿವೃದ್ಧಿ ಕಡೆಗೆ ಹೆಚ್ಚು ಒತ್ತು ನೀಡಿದರೆ ದೇಶದ ಜನತೆಯ ಹಸಿವು ನೀಗುವುದಿಲ್ಲ. ಅನ್ನ ಬೆಳೆಯುವ ರೈತರ ಬದುಕು ಹಸನಾಗಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಬೇಕೆಂದು ತಿಳಿಸಿದರು.

ಎಂ.ಪಿ ಪ್ರಕಾಶ್ ಸಮಾಜಮುಖಿ ಟ್ರಸ್ಟ್‌ನ ಅಧ್ಯಕ್ಷೆ ಎಂ.ಪಿ.ವೀಣಾ ಮಹಾಂತೇಶ್ ಮಾತನಾಡಿ, ದೇಶಿ ಸಂಸ್ಕೃತಿಯ ಕೃಷಿ ಪದ್ಧತಿಯಾದ ಸಾವಯವ ಕೃಷಿ ಪದ್ಧತಿಯನ್ನು ಇಂದು ನಾವು ಅಳವಡಿಸಿಕೊಳ್ಳಬೇಕಿದೆ. ಎಲ್ಲ ಬೆಳೆಗಳಿಗೂ ಒಕ್ಕೂಟಗಳಿವೆ, ನಿಗಮಗಳಿವೆ. ಆದರೆ. ಈರುಳ್ಳಿ ಬೆಳೆಗಾರರ ಒಕ್ಕೂಟವಿರಲಿಲ್ಲ. ಇದನ್ನು ಗಮನಿಸಿ ಸುಮಾರು ಹತ್ತು ಜಿಲ್ಲೆಗಳಿಂದ 200ಕ್ಕೂ ಹೆಚ್ಚು ರೈತರು ಒಗ್ಗೂಡಿ ಒಕ್ಕೂಟ ರಚನೆ ಮಾಡಿಕೊಂಡಿದ್ದೇವೆಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News