ಬಿಎಂಟಿಸಿಗೆ 3.47 ಕೋಟಿ ರೂ. ಆದಾಯ ಹೆಚ್ಚಳ

Update: 2019-09-17 17:39 GMT

ಬೆಂಗಳೂರು, ಸೆ.17: ಕೇಂದ್ರ ಸರಕಾರದ ಮೋಟಾರು ವಾಹನ ತಿದ್ದುಪಡಿ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೊಳಿಸಿದ ಬಳಿಕ ಕಳೆದ 15 ದಿನಗಳಲ್ಲಿ ಬಿಎಂಟಿಸಿಗೆ ಸರಿಸುಮಾರು 3.47 ಕೋಟಿ ಆದಾಯ ಹೆಚ್ಚಳವಾಗಿದೆ ಎಂದು ಸಂಸ್ಥೆಯ ಅಧಿಕಾರಿಗಳು ಅಂದಾಜಿಸಿದ್ದಾರೆ.

ರಾಜ್ಯದಲ್ಲಿ ಸೆ.1 ರಿಂದ ಮೋಟಾರು ವಾಹನ ಕಾಯ್ದೆಯಡಿ ದುಬಾರಿ ದಂಡ ವಿಧಿಸಲಾಗುತ್ತಿದೆ. ಇದರಿಂದಾಗಿ ಅಧಿಕ ದಂಡ ಪಾವತಿಸಲು ಹಿಂದೇಟು ಹಾಕುತ್ತಿರುವ ಸವಾರರು ನಗರ ಸಾರಿಗೆ ಬಸ್‌ಗಳಲ್ಲಿ ಸಂಚಾರ ಮಾಡಲು ಆರಂಭಿಸಿದ್ದಾರೆ. ಹೀಗಾಗಿ, ಸೆ.1 ರಿಂದ 15 ರ ಅವಧಿಯಲ್ಲಿ ಅಧಿಕ ವರಮಾನ ಬಂದಿದೆ.

ಬಿಎಂಟಿಸಿಗೆ ಹಿಂದಿನ ವರ್ಷ ಇದೇ ಸಮಯದಲ್ಲಿ 53.47 ಕೋಟಿಯಷ್ಟಿದ್ದ ವರಮಾನ, ಈ ಬಾರಿ 56.88 ಕೋಟಿಗೆ ಜಿಗಿದಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಅಂದರೆ, ನಗರ ಪ್ರದೇಶದಲ್ಲಿನ ಜನರು ದುಬಾರಿ ದಂಡ ತೆರುವ ಬದಲಿಗೆ ವಾಹನಗಳನ್ನು ಬಳಸದೇ ಬಿಎಂಟಿಸಿಯಲ್ಲಿ ಸಂಚಾರ ಮಾಡುತ್ತಿರುವುದು ಕಂಡು ಬಂದಿದೆ.

ಚಾಲನಾ ಪರವಾನಗಿ, ವಿಮೆ ನವೀಕರಣ, ಮಾಲಕತ್ವ ವರ್ಗಾವಣೆ, ವಾಯುಮಾಲಿನ್ಯ ಪ್ರಮಾಣಪತ್ರ ಸೇರಿದಂತೆ ವಿವಿಧ ದಾಖಲಾತಿ ಪಡೆಯಲು ಸಾರಿಗೆ ಇಲಾಖೆಯ ಕಚೇರಿಗಳ ಬಳಿ ಪ್ರತಿನಿತ್ಯ ವಾಹನ ಮಾಲಕರು ಸಾಲುಗಳಲ್ಲಿ ನಿಂತು ಕಾಯುತ್ತಿದ್ದಾರೆ. ಮತ್ತೊಂದು ಕಡೆ ದುಬಾರಿ ದಂಡ ಕಟ್ಟಲು ಸಾಧ್ಯವಾಗದಿದ್ದರಿಂದ ವಾಹನಗಳನ್ನು ರಸ್ತೆಗಿಳಿಸಿಲ್ಲ.

ಬಿಎಂಟಿಸಿಯಲ್ಲಿ ಪ್ರತಿದಿನ ಬಸ್ ಪಾಸ್ ಹೊಂದಿದವರು ಸೇರಿ ಸರಾಸರಿ 35 ಲಕ್ಷದಿಂದ 40 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡುತ್ತಾರೆ. ಇದೀಗ ಸೆಪ್ಟೆಂಬರ್ 1 ರಿಂದ ಹೆಚ್ಚುವರಿಯಾಗಿ 2.50 ಲಕ್ಷ ಜನರು ಪ್ರಯಾಣ ಮಾಡುತ್ತಿದ್ದಾರೆ ಎಂದು ಅಂದಾಜು ಮಾಡಲಾಗಿದೆ. ಮುಂದಿನ ದಿನಗಳಲ್ಲಿಯೂ ಇದೇ ರೀತಿ ಮುಂದುವರಿದರೆ ಸಂಸ್ಥೆ ಮತ್ತಷ್ಟು ಆರ್ಥಿಕವಾಗಿ ಸಬಲವಾಗುತ್ತದೆ. ಅಲ್ಲದೆ, ನಗರದಲ್ಲಿ ಸಂಚಾರ ದಟ್ಟಣೆ, ವಾಯು ಮಾಲಿನ್ಯದ ಪ್ರಮಾಣ ಗಣನೀಯವಾಗಿ ಇಳಿಕೆಯಾಗುತ್ತದೆ ಎಂದು ಬಿಎಂಟಿಸಿ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News