ಮಿಂಚಿದ ಗಿಲ್ ; ಭಾರತ ‘ಎ’ 233/3

Update: 2019-09-17 18:02 GMT

 ಮೈಸೂರು, ಸೆ.17: ದಕ್ಷಿಣ ಆಫ್ರಿಕಾ ‘ಎ’ ವಿರುದ್ಧ ಎರಡನೇ ಅನಧಿಕೃತ ಟೆಸ್ಟ್‌ನಲ್ಲಿ ಭಾರತ ‘ಎ’ ತಂಡದ ಶುಭಮನ್ ಗಿಲ್ ಆಕರ್ಷಕ 92 ರನ್ ಗಳಿಸುವ ಮೂಲಕ ಮಿಂಚಿದ್ದಾರೆ.

ಅನಧಿಕೃತ ಟೆಸ್ಟ್‌ನ ಮೊದಲ ದಿನವಾಗಿರುವ ಮಂಗಳವಾರ ದಿನದಾಟದಂತ್ಯಕ್ಕೆ ಭಾರತ ‘ಎ’ ತಂಡ 74 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 233 ರನ್ ಗಳಿಸಿದೆ.

 ಮಂದ ಬೆಳಕಿನ ಕಾರಣದಿಂದಾಗಿ ಮೊದಲ ದಿನದ ಆಟ ಬೇಗನೆ ಕೊನೆಗೊಂಡಿತು. ಆಟ ನಿಂತಾಗ ಫಾರ್ಮ್ ಕಳೆದುಕೊಂಡಿರುವ ಕರುಣ್ ನಾಯರ್ 78 ರನ್ ಮತ್ತು 36 ರನ್ ಗಳಿಸಿರುವ ನಾಯಕ ವೃದ್ಧಿಮಾನ್ ಸಹಾ ಔಟಾಗದೆ ಕ್ರೀಸ್‌ನಲ್ಲಿದ್ದರು.

   ಆರಂಭಿಕ ಬ್ಯಾಟ್ಸ್‌ಮನ್ ಗಿಲ್ 137 ಎಸೆತಗಳಲ್ಲಿ 12 ಬೌಂಡರಿ ಮತ್ತು 1 ಸಿಕ್ಸರ್ ಇರುವ 92 ರನ್ ಗಳಿಸುವ ಮೂಲಕ ಮತ್ತೊಮ್ಮೆ ಶತಕ ವಂಚಿತಗೊಂಡರು. ತಿರುವನಂತಪುರದಲ್ಲಿ ಮೊದಲ ಪಂದ್ಯದಲ್ಲಿ 90 ರನ್ ಗಳಿಸಿ ಶತಕ ವಂಚಿತಗೊಂಡಿದ್ದರು. ದಕ್ಷಿಣ ಆಫ್ರಿಕಾ ‘ಎ’ ತಂಡದ ದಾಳಿಗೆ ಸಿಲುಕಿ ಭಾರತ ಮೊದಲ ವಿಕೆಟ್‌ನ್ನು ಬೇಗನೆ ಕಳೆದುಕೊಂಡಿತು. ಐದನೇ ಓವರ್‌ನಲ್ಲಿ ಬಂಗಾಳದ ಆರಂಭಿಕ ದಾಂಡಿಗ ಅಭಿಮನ್ಯು ಈಶ್ವರನ್ (5) ಅವರನ್ನು ಲುಂಗಿ ಗಿಡಿ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು. ಪ್ರಿಯಾಂಕ್ ಪಾಂಚಾಲ್ 6 ರನ್ ಗಳಿಸಿ ಔಟಾಗುವುದರೊಂದಿಗೆ ಭಾರತ ‘ಎ’ 31ಕ್ಕೆ 2 ವಿಕೆಟ್ ಕಳೆದುಕೊಂಡಿತು. ಬಳಿಕ ಗಿಲ್ ಮತ್ತು ಕರುಣ್ ನಾಯರ್ ತಂಡವನ್ನು ಮುನ್ನಡೆಸಿ ಮೂರನೇ ವಿಕೆಟ್‌ಗೆ 135 ರನ್ ಸೇರಿಸಿದರು. ಗಿಲ್ 50.2ನೇ ಓವರ್‌ನಲ್ಲಿ ಸಿಪಾಮ್ಲ ಓವರ್‌ನಲ್ಲಿ ಮುತ್ತುಸ್ವಾಮಿಗೆ ಕ್ಯಾಚ್ ನೀಡಿದರು. ಬಳಿಕ ನಾಯರ್ ಮತ್ತು ಸಹಾ ತಂಡದ ಬ್ಯಾಟಿಂಗ್‌ನ್ನು ಮುನ್ನಡೆಸಿದರು. ಈ ಜೋಡಿ 4ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 67 ರನ್ ಸೇರಿಸಿ ಬ್ಯಾಟಿಂಗ್‌ನ್ನು 2ನೇ ದಿನಕ್ಕೆ ಕಾಯ್ದಿರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News