ಪೊಲೀಸರ ವೇತನ ಪರಿಷ್ಕರಣೆ ಸಂಬಂಧ ನಾಳೆ ಅಂತಿಮ ಸುತ್ತೋಲೆ: ಗೃಹ ಸಚಿವ ಬೊಮ್ಮಾಯಿ

Update: 2019-09-18 13:38 GMT

ಬೆಂಗಳೂರು, ಸೆ.18: ಪೊಲೀಸರ ವೇತನ ಪರಿಷ್ಕರಣೆ ಮತ್ತು ಸುಧಾರಣೆಗಾಗಿ ರಚಿಸಿದ್ದ ಎಡಿಜಿಪಿ ಔರಾದ್ಕರ್ ನೇತೃತ್ವದ ಸಮಿತಿ ವರದಿ ಸಂಬಂಧ ನಾಳೆ ಅಥವಾ ನಾಳಿದ್ದು ಅಂತಿಮ ಸುತ್ತೋಲೆ ಹೊರಡಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ಬುಧವಾರ ನಗರದ ನೃಪತುಂಗ ರಸ್ತೆಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಪೊಲೀಸ್ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ಏರ್ಪಡಿಸಿದ್ದ, ಇಂಜಿನಿಯರ್‌ಗಳ ದಿನಾಚರಣೆ ಉದ್ಘಾಟನಾ ಸಮಾರಂಭದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಪೊಲೀಸ್ ಇಲಾಖೆಗೆ ವೇತನ ಶ್ರೇಣಿ ನಿಗದಿಪಡಿಸಿ ಸೆ.13ರಂದು ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್.ರಾಜು ಹೊರಡಿಸಿದ್ದ ಆದೇಶಕ್ಕೆ ಸರಕಾರ ತಡೆ ನೀಡಿಲ್ಲ. ಬದಲಾಗಿ, ಕೆಲ ಸ್ಪಷ್ಟನೆಗಾಗಿ ಹಣಕಾಸು ಆಯೋಗಕ್ಕೆ ಕಳುಹಿಸಲಾಗಿದ್ದು, ನಾಳೆ ಅಥವಾ ನಾಡಿದ್ದು, ಅಂತಿಮ ನಿರ್ಧಾರ ಪ್ರಕಟಿಸಲಾಗುವುದೆಂದು ಮಾಹಿತಿ ನೀಡಿದರು.

ಇದಕ್ಕೂ ಮೊದಲು ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು, ಪೊಲೀಸ್ ಇಲಾಖೆಯಲ್ಲಿನ ಸೇವೆ ಅತ್ಯಂತ ಕಠಿಣವಾಗಿದ್ದು, ಇಲ್ಲಿ ಬದ್ಧತೆ ಅತ್ಯಗತ್ಯ. ಆಧುನಿಕತೆಗೆ ತಕ್ಕಂತೆ ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಪೊಲೀಸರು ಕೆಲಸ ಮಾಡಬೇಕೆಂದು ಅವರು ಸಲಹೆ ನೀಡಿದರು. ಪೊಲೀಸರೆಂದರೆ ಕೇವಲ ಕಾನೂನು ಮತ್ತು ಸುವ್ಯವಸ್ಥೆ ರಕ್ಷಣೆ ಜವಾಬ್ದಾರಿ ನಿರ್ವಹಣೆಗೆ ಮಾತ್ರವಲ್ಲ. ಸಮಾಜದ ಸ್ವಾಸ್ಥ್ಯ, ರಕ್ಷಣೆ ಮಾಡಬೇಕಿದೆ. ಇದು ಎಲ್ಲ ಇಲಾಖೆಗಳಿಗಿಂತಲೂ ಅತ್ಯಂತ ಮಹತ್ವದ ಜವಾಬ್ದಾರಿಯಾಗಿದ್ದು, ಸಾರ್ವಜನಿಕರು ತಮ್ಮ ಮೇಲೆ ಅಪಾರ ನಂಬಿಕೆ ಇಟ್ಟಿದ್ದಾರೆ ಎಂದು ನುಡಿದರು.

ಪೊಲೀಸ್ ವಸತಿ ನಿಗಮ 2017ರಿಂದೀಚೆಗೆ ವಾಣಿಜ್ಯ ಉದ್ದೇಶಗಳನ್ನು ಕೈಗೆತ್ತಿಕೊಂಡು ಲಾಭಗಳಿಸುತ್ತಿದ್ದು, ಇತರ ನಿಗಮಗಳಿಗೆ ತನ್ನ ಕಾರ್ಯವೈಖರಿಯಿಂದ ಮಾದರಿಯಾಗಿದೆ ಎಂದ ಅವರು, ಮುಂದಿನ ಮೂರು ವರ್ಷಗಳಲ್ಲಿ ಸುಮಾರು 15 ಸಾವಿರ ಕೋಟಿ ರೂ. ವೆಚ್ಚದ ಯೋಜನೆಗಳನ್ನು ಕೈಗೊಳ್ಳುವ ಉದ್ದೇಶ ಹೊಂದಿದೆ. ಈಗಾಗಲೇ ಹಲವಾರು ಉತ್ತಮ ಕೆಲಸಗಳನ್ನು ಮಾಡಿರುವ ನಿಗಮ ಮುಂದಿನ ದಿನಗಳಲ್ಲೂ ತನ್ನ ಜವಾಬ್ದಾರಿಯನ್ನು ನಿಭಾಯಿಸಲಿದೆ ಎಂದರು.

ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಮಾತನಾಡಿ, ಈಗಾಗಲೇ ಪೊಲೀಸ್ ವಸತಿ ನಿಗಮದ ವತಿಯಿಂದ 11 ಸಾವಿರ ವಸತಿ ಗೃಹಗಳನ್ನು ನಿರ್ಮಾಣ ಮಾಡಲಾಗಿದ್ದು, ಇದೇ ರೀತಿ, ಹಲವು ಯೋಜನೆಗಳನ್ನು ರೂಪಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ವಸತಿ ಹಾಗೂ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಘವೇಂದ್ರ ಔರಾದ್ಕರ್, ಆಂತರಿಕ ಭದ್ರತೆ ವಿಭಾಗದ ಡಿಜಿಪಿ ಎ.ಎಂ.ಪ್ರಸಾದ್, ಹಿರಿಯ ಪೊಲೀಸ್ ಅಧಿಕಾರಿ ಪ್ರವೀಣ್ ಸೂದ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News