ನೂರು ಪದಗಳ ಅರ್ಥ ಹೊಮ್ಮಿಸುವ ಒಂದು ಚಿತ್ರ: ಯಡಿಯೂರಪ್ಪ

Update: 2019-09-18 14:35 GMT

ಬೆಂಗಳೂರು, ಸೆ.18: ಮಾತಿನಲ್ಲಿ ಹೇಳಲಾಗದ ನೂರಾರು ಪದಗಳ ಅರ್ಥವನ್ನು ಒಂದು ಚಿತ್ರದ ಮೂಲಕ ಅಭಿವ್ಯಕ್ತಗೊಳಿಸಬಹುದಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಬುಧವಾರ ನಗರದ ಚಿತ್ರಕಲಾ ಪರಿಷತ್ ನಲ್ಲಿ ಕರ್ನಾಟಕ ಫೋಟೋ ಜರ್ನಲಿಸ್ಟ್ ಅಸೋಸಿಯೇಶನ್‌ನಿಂದ ಆಯೋಜಿಸಿದ್ದ ನೂತನ ಸಂಘದ ಉದ್ಘಾಟನಾ ಸಮಾರಂಭ ಹಾಗೂ ಕರ್ನಾಟಕದಲ್ಲಿ ಇತ್ತೀಚಿಗೆ ನೆರೆ ಹಾವಳಿ ಕುರಿತ ಛಾಯಾಚಿತ್ರ ಪ್ರದರ್ಶನ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ನೂರು ಪದಗಳ ಅರ್ಥವನ್ನು ಒಂದೇ ಒಂದು ಛಾಯಾಚಿತ್ರ ಹೇಳಬಲ್ಲದು. ಯಾರಿಂದಲೂ ವರ್ಣಿಸಲು ಸಾಧ್ಯವಾಗದ್ದನ್ನು ಚಿತ್ರದ ಮೂಲಕ ಅಭಿವ್ಯಕ್ತಿಪಡಿಸಬಹುದಾಗಿದೆ. ಅಲ್ಲದೆ, ಮಾತಿನಲ್ಲಿ ಹೇಳಲಾಗದಂತಹ ವಾಸ್ತವವನ್ನು ಚಿತ್ರದಿಂದ ತಿಳಿಸಬಹುದಾಗಿದೆ ಎಂದು ಅವರು ತಿಳಿಸಿದರು.

ಪ್ರತಿ ಜಿಲ್ಲೆಗಳಲ್ಲಿ ನೆರೆಯಿಂದಾದ ಪರಿಸ್ಥಿತಿಯನ್ನು ಅಭಿವ್ಯಕ್ತಿಸುತ್ತಿರುವ ಇಂತಹ ಛಾಯಾಚಿತ್ರಗಳನ್ನು ಪ್ರದರ್ಶಿಸುವ ಮೂಲಕ ನೆರೆಯ ಪರಿಸ್ಥಿತಿಯನ್ನು ಜನರಿಗೆ ಮುಟ್ಟಿಸಬಹುದಾಗಿದೆ. ಇಂತಹ ಪರಿಸ್ಥಿತಿಗಳನ್ನು ತಮ್ಮ ಕ್ಯಾಮರಾಗಳಲ್ಲಿ ಸೆರೆಡಿದಿರುವ ಛಾಯಾ ಚಿತ್ರಗ್ರಾಹಕರ ಸಾಮರ್ಥ್ಯ ಹಾಗೂ ಪರಿಸ್ಥಿತಿಯನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ ಎಂದರು.

ಛಾಯಾಚಿತ್ರಗಳನ್ನು ಕ್ಲಿಕ್ಕಿಸಿರುವ ಪರಿಸ್ಥಿತಿಯು ಬಹಳ ಗಂಭೀರವಾಗಿದೆ. ಪ್ರವಾಹವನ್ನು ಲೆಕ್ಕಿಸದೆ, ಪ್ರಾಣದ ಹಂಗನ್ನು ತೊರೆದು ಛಾಯಾಚಿತ್ರಕಾರರು ಜನರು ನೆರೆಯಿಂದ ಅನುಭವಿಸುತ್ತಿರುವ ಸಂಕಷ್ಟಗಳನ್ನು ಹಾಗೂ ಪ್ರಕೃತಿ ವಿಕೋಪದ ಸ್ಥಿತಿಗತಿಗಳನ್ನು ಛಾಯಾಚಿತ್ರದ ಮೂಲಕ ಸರಕಾರ ಹಾಗೂ ಜನರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ನುಡಿದರು.

ಛಾಯಾಚಿತ್ರ ಪ್ರದರ್ಶನದಲ್ಲಿ ನೆರೆ-ಬರ ಪರಿಸ್ಥಿತಿಯನ್ನು ಒಳಗೊಂಡ ನೂರಕ್ಕೂ ಹೆಚ್ಚು ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗಿತ್ತು. ಅವುಗಳಲ್ಲಿ ಪ್ರಮುಖವಾಗಿ ನೆರೆ ಪರಿಸ್ಥಿತಿಯನ್ನು ಬಿಂಬಿಸುವ ಛಾಯಾಚಿತ್ರಗಳನ್ನು ಒಳಗೊಂಡಿದ್ದವು. ಛಾಯಾಚಿತ್ರಗಳನ್ನು ಸೆರೆ ಹಿಡಿದಿದ್ದ ಅನೇಕ ಜಿಲ್ಲೆಗಳ ಛಾಯಾಚಿತ್ರ ಗ್ರಾಹಕರನ್ನು ಈ ವೇಳೆ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯೆ ತಾರಾ ಅನೂರಾಧ, ಚಿತ್ರಕಲಾ ಪರಿಷತ್‌ನ ಅಧ್ಯಕ್ಷ ಬಿ.ಎಲ್.ಶಂಕರ್, ಬಿಜೆಪಿ ಸಂಸದ ಕರಡಿ ಸಂಗಣ್ಣ ಸೇರಿದಂತೆ ಹಲವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News