ಪ್ರವಾಹ ಸಂತ್ರಸ್ತರ ಮನೆಗಳ ನಿರ್ಮಾಣಕ್ಕೆ 1 ಸಾವಿರ ಕೋಟಿ ರೂ.ಬಿಡುಗಡೆ: ಸಚಿವ ಮಾಧುಸ್ವಾಮಿ

Update: 2019-09-18 14:47 GMT

ಬೆಂಗಳೂರು, ಸೆ.18: ರಾಜ್ಯದಲ್ಲಿ ನೆರೆ ಹಾವಳಿ ಹಾಗೂ ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡಿರುವ ಸಂತ್ರಸ್ತರ ಮನೆಗಳ ನಿರ್ಮಾಣಕ್ಕಾಗಿ ಒಂದು ಸಾವಿರ ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ ಎಂದು ಕಾನೂನು ಮತ್ತು ಸಂದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಬುಧವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ಸಂತ್ರಸ್ತರಿಗೆ ತಲಾ 5 ಲಕ್ಷ ರೂ.ಗಳ ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ. ಅದರಂತೆ, ಜಿಲ್ಲಾಧಿಕಾರಿಗಳ ಖಾತೆಗಳಿಗೆ ಇನ್ನೆರಡು ದಿನಗಳಲ್ಲಿ ಹಣ ಜಮೆ ಮಾಡಲಾಗುವುದು ಎಂದರು.

ಭಾಗಶಃ ಹಾನಿಯಾಗಿರುವ ಮನೆಗಳಿಗೆ 25 ಸಾವಿರ ರೂ.ಪರಿಹಾರ ನೀಡಲು, ರಸ್ತೆಗಳು ಹಾಳಾಗಿರುವ ಕಡೆ ಲೋಕೋಪಯೋಗಿ ಇಲಾಖೆ ವತಿಯಿಂದ 500 ಕೋಟಿ ರೂ.ಅನುದಾನ ಬಿಡುಗಡೆ ಮಾಡಿಸಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಅಲ್ಲದೇ, ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿರುವುದು, ಕಾರ್ಯಾದೇಶ ಹೊರಡಿಸಿರುವ, ಪ್ರಗತಿಯಲ್ಲಿರುವ ಕಾಮಗಾರಿಗಳಿಗೆ 1500 ಕೋಟಿ ರೂ.ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಮಾಧುಸ್ವಾಮಿ ಹೇಳಿದರು.

ಬೆಳಗಾವಿಯಲ್ಲಿ ನೆರೆ ಪರಿಹಾರ ಕಾರ್ಯಗಳು ಭರದಿಂದ ಸಾಗುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳ ಮೇಲೆ ಈಗಾಗಲೇ ಸಾಕಷ್ಟು ಕೆಲಸದ ಒತ್ತಡವಿದೆ. ಆದುದರಿಂದ, ವಿಧಾನಮಂಡಲದ ಚಳಿಗಾಲದ ಅಧಿವೇಶನವನ್ನು ಬೆಳಗಾವಿ ಬದಲು ಬೆಂಗಳೂರಿನ ವಿಧಾನಸೌಧದಲ್ಲಿ ಅಕ್ಟೋಬರ್ 14 ರಿಂದ 26ರವರೆಗೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದರು.

ಹಿಂದಿನ ಸರಕಾರದ ಬಜೆಟ್ ಅನ್ನೇ ಶೇ.90ರಷ್ಟು ಭಾಗ ಅನುಮೋದನೆ ಪಡೆದುಕೊಳ್ಳಲಾಗುವುದು. ನೆರೆ ಹಾವಳಿಯಿಂದಾಗಿ ಸ್ವಲ್ಪ ಪೂರಕವಾದ ಅಂಶಗಳನ್ನು ಬಜೆಟ್‌ನಲ್ಲಿ ಅಳವಡಿಸಿಕೊಳ್ಳಲಾಗುವುದು ಎಂದು ಮಾಧುಸ್ವಾಮಿ ಹೇಳಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸೇವೆಗಳು(ವೃಂದ ಮತ್ತು ನೇಮಕಾತಿ) ನಿಯಮಗಳು, 2019ಕ್ಕೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. 6ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸಿನಂತೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಹಾಗೂ ಕಾರಾಗೃಹ ಇಲಾಖೆಗಳಲ್ಲಿನ ನಿರ್ದಿಷ್ಟ ವೃಂದಗಳ ವೇತನ ಶ್ರೇಣಿಗಳನ್ನು ಮೇಲ್ದರ್ಜೆಗೇರಿಸಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.

ಬೆಂಗಳೂರಿನಲ್ಲಿರುವ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯರ ಪೈಕಿ ಒಬ್ಬ ಸದಸ್ಯರ ಕಚೇರಿಯನ್ನು ಧಾರವಾಡಕ್ಕೆ ಸ್ಥಳಾಂತರಿಸಿರುವುದನ್ನು ಕೈ ಬಿಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ ಎಂದು ಮಾಧುಸ್ವಾಮಿ ತಿಳಿಸಿದರು. ಮಂಗಳೂರು, ತುಮಕೂರು, ವಿಜಯಪುರ, ಚಿತ್ರದುರ್ಗ, ದಾವಣಗೆರೆ, ಬಾಗಲಕೋಟೆ, ಚಿಕ್ಕಮಗಳೂರು, ಹಾವೇರಿ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿರುವ ಜಿಲ್ಲಾ ಆಸ್ಪತ್ರೆಗಳಲ್ಲಿ ತಲಾ 1 ಕೋಟಿ ರೂ.ಗಳಂತೆ ಒಟ್ಟು 10 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಸ್ತನರೇಖ ವ್ಯವಸ್ಥೆ (Digital Mammography) ಹಾಗೂ ಪ್ಯಾಪ್‌ಸ್ಮಿಯರ್ ಪರೀಕ್ಷೆ (Papsmear Scanning) ವ್ಯವಸ್ಥೆಯನ್ನು ಪ್ರಾರಂಭಿಸಲು ತೀರ್ಮಾನಿಸಲಾಗಿದೆ.

ಏಷ್ಯಾ ಅಭಿವೃದ್ಧಿ ಬ್ಯಾಂಕ್‌ನ ಸಾಲ ಸಹಾಯದ ಕರ್ನಾಟಕ ಸಮಗ್ರ ಮತ್ತು ಸಮರ್ಥನೀಯ ಜಲಸಂಪನ್ಮೂಲ ನಿರ್ವಹಣೆ ಬಂಡವಾಳ ಕಾರ್ಯಕ್ರಮ ಅಡಿಯಲ್ಲಿ ವಿಜಯನಗರ ಕಾಲುವೆಗಳ ಆಧುನೀಕರಣ ಕಾಮಗಾರಿಯ 456.63 ಕೋಟಿ ರೂ.ಗಳ ಪರಿಷ್ಕೃತ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ತುರುವಿಹಾಳ ಗ್ರಾಮದಲ್ಲಿ ನೀರಾವರಿ ಇಲಾಖೆಯ ಅಧೀನದಲ್ಲಿರುವ 2.35 ಎಕರೆ ಜಮೀನನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ನಿರ್ಮಾಣಕ್ಕಾಗಿ ಶಿಕ್ಷಣ ಇಲಾಖೆಗೆ ಉಚಿತವಾಗಿ ಹಸ್ತಾಂತರಿಸಲು ತೀರ್ಮಾನ ಮಾಡಲಾಗಿದೆ ಎಂದು ಮಾಧುಸ್ವಾಮಿ ಹೇಳಿದರು.

ಬೆಳಗಾವಿ ಜಿಲ್ಲೆ ಮತ್ತು ತಾಲೂಕಿನ ಹಿಂಗರಗಿ ಹೋಬಳಿಯ 21 ಗ್ರಾಮಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸುವುದನ್ನು ಒಳಗೊಂಡಂತೆ ಹಾಲಿ 13 ಸಣ್ಣ ನೀರಾವರಿ/ಜಿಲ್ಲಾ ಪಂಚಾಯತ್ ಕೆರೆಗಳನ್ನು ಕಲ್ಲೇಹೋಳ್ ಗ್ರಾಮದ ಹತ್ತಿರ ಮಾರ್ಕಂಡೇಯ ನದಿಯಿಂದ 0.162 ಟಿಎಂಸಿ ನೀರನ್ನೆತ್ತಿ ತುಂಬಿಸುವ ಯೋಜನೆಯ 143.53 ಕೋಟಿ ರೂ.ಗಳ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಅಗರ(ಎಸ್.ಟಿ.ಪಿ) ಕೆರೆಯಿಂದ ಕೆ.ಸಿ. ಪಂಪ್‌ಹೌಸ್‌ವರೆಗೆ ಹೆಚ್ಚುವರಿಯಾಗಿ 35 ಎಂಎಲ್‌ಡಿ ನೀರನ್ನು ಕೊಂಡೊಯ್ಯಲು 30 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಪೈಪ್‌ಲೈನ್ ಅಳವಡಿಸುವ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಮಾಧುಸ್ವಾಮಿ ತಿಳಿಸಿದರು.

ಕೇಂದ್ರ ಸರಕಾರದ ಪೋಷಣ್ ಅಭಿಯಾನ ಯೋಜನೆಯಡಿ ರಾಜ್ಯಾದ್ಯಂತ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್, ಪವರ್ ಬ್ಯಾಂಕ್, ಸ್ಟೆಡಿಯೊಮೀಟರ್, ಇನ್‌ಫಾನ್ಟೋ ಮೀಟರ್, ತೂಕ ಮಾಪನ(ಮಗು ಹಾಗೂ ತಾಯಿ) ಇವುಗಳನ್ನು ಖರೀದಿಸಲು ಅನುಮತಿ ನೀಡಲಾಗಿದೆ ಎಂದು ಅವರು ಹೇಳಿದರು.

ಕಲಬುರಗಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ 300 ಹಾಸಿಗೆಗಳ ಜಯದೇವ ಮಾದರಿ ಆಸ್ಪತ್ರೆಯನ್ನು 150 ಕೋಟಿ ರೂ.ಅಂದಾಜು ಮೊತ್ತದಲ್ಲಿ ನಿರ್ಮಿಸಲು ನಿರ್ಧರಿಸಲಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಮೂರು ಹಂತಗಳಲ್ಲಿ ಅನುದಾನ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ. ಇನ್ಫೋಸಿಸ್ ಸಂಸ್ಥೆಯುವರು ಆನೇಕಲ್ ಬಳಿ ಐಟಿವಿಎಸ್ ಕೇಂದ್ರ ನಿರ್ಮಿಸಲು ಉದ್ದೇಶಿಸಿದ್ದಾರೆ. ಅವರಿಗೆ ಸೇರಿದ 380 ಎಕರೆ ಭೂಮಿಯಿದೆ. ಈ ಭೂಮಿ ಮಧ್ಯೆ ಸರಕಾರಿ ಖರಾಬ್ ಹಾಗೂ ಗೋಮಾಳದ 8.33 ಎಕರೆ ಜಮೀನು ಇದೆ. ಇದನ್ನು ಇನ್ಫೋಸಿಸ್‌ಗೆ ನೀಡಿ, ಅವರಿಂದ ಸರಕಾರಕ್ಕೆ ಪರ್ಯಾಯ ಜಮೀನು ಪಡೆಯಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.

ರೋರಿಚ್-ದೇವಿಕಾರಾಣಿ ಎಸ್ಟೇಟ್‌ನ 468.33 ಎಕರೆ ಜಮೀನು ಒತ್ತುವರಿಯಾಗದಂತೆ ತಡೆಯಲು ಫೆನ್ಸಿಂಗ್ ಅಳವಡಿಸಲು ತೀರ್ಮಾನಿಸಲಾಗಿದೆ. ಸಂಡೂರು ತಾಲೂಕಿನ 28 ಜನ ವಸತಿ ಪ್ರದೇಶಗಳಿಗೆ 57.75 ಕೋಟಿ ರೂ.ವೆಚ್ಚದಲ್ಲಿ ಬಹುಗ್ರಾಮ ಯೋಜನೆಯಡಿ ಕುಡಿಯುವ ನೀರು ಒದಗಿಸಲು ನಿರ್ಧರಿಸಲಾಗಿದೆ ಎಂದು ಮಾಧುಸ್ವಾಮಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News