ಬಿಜೆಪಿಯ ಕನ್ನಡ ವಿರೋಧಿ ನೀತಿಯನ್ನು ಇನ್ನೆಷ್ಟು ದಿನ ಸಹಿಸಿಕೊಳ್ಳಬೇಕು?: ಸಿದ್ದರಾಮಯ್ಯ ಪ್ರಶ್ನೆ

Update: 2019-09-18 15:11 GMT

ಬೆಂಗಳೂರು, ಸೆ.18: ಎಸ್ಸಿಪಿ-ಟಿಎಸ್ಪಿ ಕಾಯ್ದೆಯನ್ನು ದುರ್ಬಲಗೊಳಿಸಲು ಮುಂದಾದರೆ ದಲಿತ ಸಮುದಾಯ ದಂಗೆ ಏಳಲಿದ್ದು, ಅದರ ಮುಂದಾಳತ್ವವನ್ನು ನಾನೇ ವಹಿಸಿಕೊಳ್ಳಲಿದ್ದೇನೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. 

ಪರಿಶಿಷ್ಟ ಜಾತಿ, ಪಂಗಡದ ಪಾಲಿಗೆ ಎಸ್ಸಿಪಿ-ಟಿಎಸ್ಪಿ ಕ್ರಾಂತಿಕಾರಕ ಯೋಜನೆಯಾಗಿದೆ. ಆದರೆ, ಈ ಕಾಯ್ದೆಯನ್ನು ದುರ್ಬಲಗೊಳಿಸಲು ಬಿಜೆಪಿ ಸರಕಾರ ಷಡ್ಯಂತ್ರ ರೂಪಿಸುತ್ತಿದೆ. ಸರಕಾರದ ದಲಿತ ವಿರೋಧಿ ನೀತಿ ವಿರುದ್ಧ ಬಿಜೆಪಿಯ ದಲಿತ ಸಮುದಾಯದ ಶಾಸಕರೂ ದನಿ ಎತ್ತಬೇಕು. ಇಲ್ಲದಿದ್ದರೆ ಇತಿಹಾಸ ನಿಮ್ಮನ್ನು ಕ್ಷಮಿಸದು ಎಂದು ತಿಳಿಸಿದ್ದಾರೆ.

ಕೇಂದ್ರದ ಬಿಜೆಪಿ ಸರಕಾರ ಎಲ್‌ಐಸಿ ಸೇರಿದಂತೆ ಕೇಂದ್ರಾಡಳಿತಕ್ಕೆ ಒಳಪಟ್ಟ ಹುದ್ದೆಗಳ ಪರೀಕ್ಷೆಯನ್ನು ಕೇವಲ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಬರೆಯಲು ಕಡ್ಡಾಯಗೊಳಿಸಿದೆ. ಬಿಜೆಪಿ ನಾಯಕರ ಇಂತಹ ಕನ್ನಡ ವಿರೋಧಿ ನೀತಿಯನ್ನು ಇನ್ನೆಷ್ಟು ದಿನ ಸಹಿಸಿಕೊಳ್ಳಬೇಕೆಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಭಾರತ ಬಹುತ್ವದ ನೆಲ, ಇಲ್ಲಿನ ವಿವಿಧ ಭಾಷೆ, ಸಂಸ್ಕೃತಿಯನ್ನು ಗೌರವಿಸಿದಾಗ ಮಾತ್ರ ಒಕ್ಕೂಟ ವ್ಯವಸ್ಥೆ ಬಲಗೊಳ್ಳಲು ಸಾಧ್ಯ. ಈ ನೆಲದಲ್ಲಿ ಯಾವುದೇ ಒಂದು ಭಾಷೆ, ಸಮುದಾಯದ ಕಡಗಣನೆ ಸಲ್ಲದು. ಇದನ್ನು ಕೇಂದ್ರದ ಬಿಜೆಪಿ ವರಿಷ್ಠರು ಅರ್ಥ ಮಾಡಿಕೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News