ಗದ್ದಲ, ಗಲಾಟೆಯ ನಡುವೆಯೇ ಬಿಬಿಎಂಪಿ ಆಡಳಿತ ವರದಿ ಮಂಡನೆ

Update: 2019-09-18 15:26 GMT

ಬೆಂಗಳೂರು, ಸೆ. 18: ಬಿಬಿಎಂಪಿಯಲ್ಲಿಂದು ಗದ್ದಲ, ಗಲಾಟೆಯ ನಡುವೆಯೇ ಉಪ ಮೇಯರ್ ಭದ್ರೇಗೌಡ ಮೂರು ವರ್ಷಗಳವರೆಗಿನ ಆಡಳಿತ ವರದಿಯನ್ನು ಮಂಡಿಸಿದರು.

ಬುಧವಾರ ಪಾಲಿಕೆಯ ಸಭಾಂಗಣದಲ್ಲಿ ನಡೆದ ವಿಶೇಷ ಕೌನ್ಸಿಲ್ ಸಭೆಯಲ್ಲಿ ಭದ್ರೇಗೌಡ 2012-13 ರಿಂದ 2014-15ವರೆಗಿನ ಮೂರು ವರ್ಷಗಳ ಆಡಳಿತ ವರದಿಯನ್ನು ಮಂಡಿಸಿದರು. ಈ ವೇಳೆ ಆಡಳಿತ ಹಾಗೂ ಪ್ರತಿಪಕ್ಷದ ನಡುವೆ ಸದಸ್ಯರ ನಡುವೆ ಚರ್ಚೆ ನಡೆದು, ಗಲಾಟೆ, ಗದ್ದಲಕ್ಕೆ ಸಾಕ್ಷಿಯಾಯಿತು. ಮೇಯರ್ ಗಂಗಾಂಬಿಕೆ ಸಭೆಯನ್ನು 15 ನಿಮಿಷಗಳ ಕಾಲ ಮುಂದೂಡಿದರು.

ಸಭೆ ಮರು ಆರಂಭವಾಗುತ್ತಿದ್ದಂತೆ, ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜಿದ್, ಪಾಲಿಕೆಯ ಆಡಳಿತ ವರದಿಯನ್ನು ಇಂದು ಮಂಡಿಸಲಾಗುವುದು ಎಂದು ಪ್ರಸ್ತಾವನೆಯ ಮುಂದಿಟ್ಟರು. ಆಗ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ, ಕ್ರಿಯಾಲೋಪವೆತ್ತಿ ಆಡಳಿತ ವರದಿ ಮಂಡನೆಗೆ ಸ್ವಾಗತ ಕೋರುತ್ತೇನೆ. ಆದರೆ ಕೆಎಂಸಿ ಕಾಯ್ದೆ ಏನು ಹೇಳುತ್ತದೆ ಎಂಬುದನ್ನು ಸಭೆಗೆ ತಿಳಿಸಬೇಕು ಎಂದು ಪಟ್ಟು ಹಿಡಿದರು.

1996 ರಿಂದ ಈವರೆಗೂ ಸಭೆಯಲ್ಲಿ ಪಾಲಿಕೆಯ ಹಿರಿಯ ಸದಸ್ಯರು ಮಾತನಾಡಿದ್ದಾರೆ. ವರದಿ ಮಂಡಿಸಿದ ನಂತರ, ಆ ಬಗ್ಗೆ ಸುದೀರ್ಘ ಚರ್ಚೆ ನಡೆಸಬೇಕಿದೆ. ಆದರೆ ತರಾತುರಿಯಲ್ಲಿ ಆಡಳಿತ ವರದಿಯನ್ನು ಮಂಡಿಸಲಾಗುತ್ತಿದೆ ಎಂದು ಆರೋಪಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯ ಎಂ.ಶಿವರಾಜು, ಪಾಲಿಕೆಯಲ್ಲಿ ಬಿಜೆಪಿ ಆಡಳಿತವಿದ್ದ ಸಂದರ್ಭದಲ್ಲಿನ ದೋಷಗಳು ಬಯಲಾಗುತ್ತವೆ ಎಂದು ಆತಂಕಗೊಂಡಿರಬಹುದು ಎಂದು ಟೀಕಿಸಿದರು. ಇದಕ್ಕೆ ಬಿಜೆಪಿ ಸದಸ್ಯರು ಹಾಗೇನೂ ಇಲ್ಲ, ಆಡಳಿತ ವರದಿಯನ್ನು ಮಂಡನೆ ಮಾಡುವುದಕ್ಕೆ ಸ್ವಾಗತಿಸುತ್ತಿದ್ದೇವೆ. ಅಗತ್ಯಬಿದ್ದಲ್ಲಿ ಎಲ್ಲವೂ ದಾಖಲಾಗಲಿ ಎಂದು ಸವಾಲು ಹಾಕಿದರು.

ಕಳೆದ 20 ವರ್ಷಗಳ ಕಾರ್ಯಕಲಾಪಗಳನ್ನು ಗಮನಿಸಬೇಕು. ಕಳೆದ ತಿಂಗಳೇ ಆಡಳಿತ ವರದಿಯನ್ನು ಮಂಡಿಸಿದ್ದರೆ, ಚರ್ಚೆ ನಡೆಸಬಹುದಾಗಿತ್ತು ಎಂದು ಪದ್ಮನಾಭ ರೆಡ್ಡಿ ಹೇಳಿದರು. ಅದಕ್ಕೆ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜಿದ್, ಈಗಲೂ ಕಾಲ ಮಿಂಚಿಲ್ಲ. ಮುಂದಿನ ಮೇಯರ್ ಮತ್ತು ಉಪಮೇಯರ್ ಅವಧಿಯಲ್ಲಿ ಚರ್ಚೆ ನಡೆಸಬಹುದು ಎಂದರು.

ಕಾನೂನು ಕೋಶದ ಮುಖ್ಯಸ್ಥ ದೇಶಪಾಂಡೆ ಮಾತನಾಡಿ, ಕೌನ್ಸಿಲ್ ಚುನಾವಣೆ ನಂತರ, ಮೊದಲ ಸಭೆಯಲ್ಲಿ ಅಥವಾ ಯಾವ ತಿಂಗಳು ಮೊದಲ ಸಭೆಯಾಗುತ್ತದೋ ಆಗ ಮಂಡನೆ ಮಾಡಬಹುದು ಎಂದು ಸ್ಪಷ್ಟಪಡಿಸಿದರು. ಈ ಹಂತದಲ್ಲಿ ಮೇಯರ್ ಗಂಗಾಂಬಿಕೆ, ಉಪಮೇಯರ್ ಭದ್ರೇಗೌಡ, ಆಯುಕ್ತ ಬಿ.ಎಚ್. ಅನಿಲ್ ಕುಮಾರ್, ಕಾಂಗ್ರೆಸ್‌ನ ಗುಣಶೇಖರ್ ಅವರು ಚರ್ಚೆಯಲ್ಲಿ ಮುಳುಗಿದ್ದರು. ನಂತರ, ಮೇಯರ್ ಅವರು ಸಭೆಯನ್ನು 15 ನಿುಷಗಳ ಕಾಲ ಮುಂದೂಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News