ಅಗ್ರಹಾರ ಕೃಷ್ಣಮೂರ್ತಿ ವಿರುದ್ಧ ಚಾರಿತ್ರವಧೆ ನಿಲ್ಲಿಸುವಂತೆ ಸಾಹಿತಿಗಳಿಂದ ಅಕಾಡೆಮಿ ಅಧ್ಯಕ್ಷ ಕಂಬಾರಗೆ ಮನವಿ

Update: 2019-09-18 16:09 GMT
ಅಗ್ರಹಾರ ಕೃಷ್ಣಮೂರ್ತಿ

ಬೆಂಗಳೂರು, ಸೆ.18: ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿರುವ ಅಗ್ರಹಾರ ಕೃಷ್ಣಮೂರ್ತಿ ವಿರುದ್ಧ ಕೇಂದ್ರ ಸಾಹಿತ್ಯ ಅಕಾಡೆಮಿ ನಡೆಸುತ್ತಿರುವ ಚಾರಿತ್ರ ವಧೆಯನ್ನು ಕೂಡಲೇ ನಿಲ್ಲಿಸಬೇಕೆಂದು ಕನ್ನಡದ ಹಿರಿಯ ಸಾಹಿತಿಗಳು, ಚಿಂತಕರು ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಅಗ್ರಹಾರ ಕೃಷ್ಣಮೂರ್ತಿ ತಮ್ಮ ಅಧಿಕಾರದ ಅವಧಿಯಲ್ಲಿ ಕೇಂದ್ರ ಸಾಹಿತ್ಯ ಅಕಾದೆಮಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ಕೃಷ್ಣಮೂರ್ತಿಯವರ ಮನೆ ಮೇಲೆ ದಾಳಿ ನಡೆಸಿದ್ದರು. ನಿವೃತ್ತಿ ಸಂದರ್ಭದಲ್ಲಿ ಅವರ ಮೇಲೆ ಕೆಲ ಆರೋಪಗಳನ್ನು ಹೊರೆಸಿ ನಿವೃತ್ತಿ ಸೌಲಭ್ಯಗಳನ್ನು ತಡೆ ಹಿಡಿಯಲಾಗಿತ್ತು.

ಅಕಾಡೆಮಿ ಆರೋಪಗಳನ್ನು ಪ್ರಶ್ನಿಸಿ ಹೈಕೋರ್ಟಿನಲ್ಲಿ ಅಗ್ರಹಾರ ಕೃಷ್ಣಮೂರ್ತಿ ರಿಟ್ ಅರ್ಜಿ ಸಲ್ಲಿಸಿದ್ದರು. ಸುಮಾರು ಏಳು ವರ್ಷಗಳ ನಂತರ ನ್ಯಾಯಾಂಗ ಹೋರಾಟದಲ್ಲಿ ಕೃಷ್ಣಮೂರ್ತಿಗೆ ನ್ಯಾಯ ಸಿಕ್ಕಿತ್ತು. ಆದರೆ, ಪುನಃ ಅಕಾಡೆಮಿ ಇವರ ವಿರುದ್ಧ ಮೇಲ್ಮನವಿ ಸಲ್ಲಿಸಿರುವುದು ಸರಿಯಲ್ಲವೆಂದು ಹಿರಿಯ ಸಾಹಿತಿ ದೇವನೂರ ಮಹಾದೇವ ನೇತೃತ್ವದಲ್ಲಿ ಅಕಾಡೆಮಿ ಅಧ್ಯಕ್ಷರಿಗೆ ಪತ್ರ ಬರೆಯಲಾಗಿದೆ. ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ ಹಾಗೂ ಅವರ ಸದಸ್ಯವರ್ಗ ಅಗ್ರಹಾರ ಕೃಷ್ಣಮೂರ್ತಿ ವಿರುದ್ಧ ಸಲ್ಲಿಸಿರುವ ಮೇಲ್ಮನವಿಯನ್ನು ಹಿಂಪಡೆದು ಅವರಿಗೆ ಸಲ್ಲಬೇಕಾದ ಎಲ್ಲಾ ಸೌಲಭ್ಯಗಳನ್ನು ಕೊಡಬೇಕೆಂದು ಸಾಹಿತಿಗಳು ಮನವಿ ಮಾಡಿದ್ದಾರೆ.

ಸಾಹಿತಿಗಳಾದ ಜಿ.ಕೆ ಗೋವಿಂದರಾವ್, ಡಾ.ವಿಜಯಮ್ಮ, ಪ್ರೊ.ಎಚ್.ಎಸ್.ಶಿವಪ್ರಕಾಶ್, ಎಸ್.ಜಿ ಸಿದ್ದರಾಮಯ್ಯ, ಕಾಳೇಗೌಡ ನಾಗವಾರ, ಪ್ರೊ. ರಾಜೇಂದ್ರ ಚೆನ್ನಿ, ಡಾ.ಎಲ್.ಹನುಮಂತಯ್ಯ, ಕುಂ. ವೀರಭದ್ರಪ್ಪ, ಅರವಿಂದ ಮಾಲಗತ್ತಿ, ಸಿ.ಬಸವಲಿಂಗಯ್ಯ, ಎಲ್.ಎನ್.ಮುಕುಂದರಾಜ್, ಡಾ. ಎಚ್.ಆರ್. ಸ್ವಾಮಿ, ಕೋಟಿಗಾನಹಳ್ಳಿ ರಾಮಯ್ಯ, ಕೆ.ಷರೀಫಾ, ಡಿ.ಉಮಾಪತಿ, ಎಂ.ಎಸ್.ಆಶಾದೇವಿ, ಕವಿತಾ ಲಂಕೇಶ್, ಕೆ.ನೀಲಾ, ದು. ಸರಸ್ವತಿ, ಬಸವರಾಜು ಮೇಗಲಕೇರಿ ಮುಂತಾದವರು ಮನವಿ ಮಾಡಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News