×
Ad

ಖಾಸಗಿ ಸುದ್ದಿ ವಾಹಿನಿಗಳ ನಿಯಂತ್ರಣ ವಿಚಾರ: ಮೇಲ್ವಿಚಾರಣಾ ಸಮಿತಿ ರಚಿಸಲು ಸರಕಾರಕ್ಕೆ ಹೈಕೋರ್ಟ್ ಆದೇಶ

Update: 2019-09-18 22:06 IST

ಬೆಂಗಳೂರು, ಸೆ.18: ಖಾಸಗಿ ಸುದ್ದಿ ವಾಹಿನಿಗಳ ನಿಯಂತ್ರಣಕ್ಕೆ 2 ತಿಂಗಳ ಒಳಗೆ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಮೇಲ್ವಿಚರಣಾ ಸಮಿತಿ ರಚಿಸಲು ಹಾಗೂ ಆಕ್ಷೇಪಾರ್ಹ ಕಾರ್ಯಕ್ರಮಗಳ ಬಗ್ಗೆ ದೂರು ದಾಖಲಿಸಲು ನೋಡಲ್ ಅಧಿಕಾರಿಗಳನ್ನು ನೇಮಿಸಲು ರಾಜ್ಯ ಸರಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.

ಈ ಕುರಿತು ವಕೀಲೆ ಗೀತಾ ಮಿಶ್ರಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಮುಹಮ್ಮದ್ ನವಾಝ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ನ್ಯಾಯಪೀಠವು ಜಿಲ್ಲಾಮಟ್ಟದಲ್ಲಿ ನೋಡಲ್ ಅಧಿಕಾರಿಗಳ ನೇತೃತ್ವದಲ್ಲಿ ದೂರು ಕೋಶಗಳನ್ನು ರಚಿಸಬೇಕು. ಈ ಕುರಿತು ಅನುಪಾಲನಾ ವರದಿಯನ್ನು ನ.22ರೊಳಗೆ ಸಲ್ಲಿಸಲು ಸೂಚಿಸಿ, ಅರ್ಜಿಯನ್ನು ಇತ್ಯರ್ಥಪಡಿಸಿತು.

ಖಾಸಗಿ ಸುದ್ದಿ ವಾಹಿನಿಗಳು ಹಾಗೂ ಇತರೆ ವಾಹಿನಿಗಳ ನಿಯಂತ್ರಣಕ್ಕೆ ಕೇಂದ್ರ ಸರಕಾರ ಕೇಬಲ್ ಟೆಲಿವಿಷನ್ ನೆಟ್‌ವರ್ಕ್ ಕಾಯ್ದೆ-1995ರ ಅನುಸಾರ ಜಿಲ್ಲಾ ಕೇಂದ್ರ ಮತ್ತು ರಾಜ್ಯದಲ್ಲಿ ಮೇಲ್ವಿಚಾರಣಾ ಸಮಿತಿ ರಚಿಸಬೇಕು. ಹಾಗೂ ನೋಡಲ್‌ಅಧಿಕಾರಿಗಳನ್ನು ನೇಮಕ ಮಾಡಬೇಕು. ಆದರೆ, ರಾಜ್ಯ ಸರಕಾರ ಈವರೆಗೆ ಸುದ್ದಿ ವಾಹಿನಿಗಳ ಕಾರ್ಯಕ್ರಮ ನಿಯಂತ್ರಣಕ್ಕೆ ಮೇಲ್ವಿಚಾರಣಾ ಸಮಿತಿ ರಚಿಸಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News