ರಾಜ್ಯ ವಕ್ಫ್ ಮಂಡಳಿ ರಚನೆಗೆ ಹೈಕೋರ್ಟ್ ಸೂಚನೆ: ಡಾ.ಮುಹಮ್ಮದ್ ಯೂಸುಫ್

Update: 2019-09-18 16:44 GMT

ಬೆಂಗಳೂರು, ಸೆ.18: ರಾಜ್ಯ ವಕ್ಫ್ ಮಂಡಳಿಯನ್ನು ಎರಡು ವಾರಗಳಲ್ಲಿ ಪೂರ್ಣ ಪ್ರಮಾಣದಲ್ಲಿ ರಚಿಸುವಂತೆ ಸರಕಾರದ ಮುಖ್ಯ ಕಾರ್ಯದರ್ಶಿ, ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಕಾರ್ಯದರ್ಶಿ ಹಾಗೂ ಬೆಂಗಳೂರು ವಿಭಾಗದ ಪ್ರಾದೇಶಿಕ ಪ್ರಾದೇಶಿಕ ಆಯುಕ್ತರಿಗೆ ಹೈಕೋರ್ಟ್ ಇಂದು ಸೂಚನೆ ನೀಡಿದೆ ಎಂದು ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ಡಾ.ಮುಹಮ್ಮದ್ ಯೂಸುಫ್ ತಿಳಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಕ್ಫ್ ಮಂಡಳಿಯ ಮುತವಲ್ಲಿ, ಶಾಸಕ ಹಾಗೂ ಸಂಸದರ ವಿಭಾಗದಿಂದ ಸದಸ್ಯರನ್ನು ಆಯ್ಕೆ ಮಾಡುವ ಚುನಾವಣೆ ನಡೆದು ಆರು ತಿಂಗಳು ಕಳೆದಿದೆ. ಆದರೆ, ಈವರೆಗೆ ಪೂರ್ಣ ಪ್ರಮಾಣದ ಮಂಡಳಿ ರಚನೆ ಮಾಡಲು ಸರಕಾರ ಆಸಕ್ತಿ ತೋರಿರಲಿಲ್ಲ ಎಂದರು.

ಈ ಹಿನ್ನೆಲೆಯಲ್ಲಿ ವಕ್ಫ್ ಮಂಡಳಿಯ ಚುನಾಯಿತ ಸದಸ್ಯರು ಹಾಗೂ ವಕ್ಫ್ ಸಂಸ್ಥೆಗಳ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಿ ನಾನು ಹೈಕೋರ್ಟ್‌ಗೆ ರಿಟ್ ಅರ್ಜಿಯನ್ನು ಸಲ್ಲಿಸಿದ್ದೆ. ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಅಲೋಕ್ ಅರಾಧೆ, ಚುನಾವಣೆ ನಡೆದು ಆರು ತಿಂಗಳು ಆಗಿದ್ದರೂ ಈವರೆಗೆ ಯಾಕೆ ಮಂಡಳಿ ರಚನೆ ಮಾಡಿಲ್ಲ ಎಂದು ಸರಕಾರದ ಪರ ವಕೀಲರನ್ನು ಪ್ರಶ್ನಿಸಿದರು ಎಂದು ಅವರು ಹೇಳಿದರು.

ರಾಜ್ಯ ವಕ್ಫ್ ನಿಯಮಾವಳಿ-2017ರ ನಿಯಮ 40 ಹಾಗೂ 41ರಡಿಯಲ್ಲಿ ಎರಡು ವಾರಗಳ ಒಳಗಾಗಿ ವಕ್ಫ್ ಮಂಡಳಿಯನ್ನು ರಚಿಸುವಂತೆ ನ್ಯಾಯಮೂರ್ತಿ ಗಳು ಸರಕಾರಕ್ಕೆ ಸೂಚನೆ ನೀಡಿದ್ದಾರೆ. ನ್ಯಾಯಾಲಯದಲ್ಲಿ ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಯೂಸುಫ್ ತಿಳಿಸಿದರು.

ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಕಾರ್ಯದರ್ಶಿ, ವಕ್ಫ್ ಮಂಡಳಿಯ ಆಡಳಿತಾಧಿಕಾರಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಪೂರ್ಣ ಪ್ರಮಾಣದ ಮಂಡಳಿ ರಚನೆಯಾಗುವವರೆಗೆ ಯಾವುದೇ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಬಾರದು ಎಂದು ಅವರು ಮನವಿ ಮಾಡಿದರು.

ಚುನಾಯಿತ ಸದಸ್ಯರು: ಮುತವಲ್ಲಿ ವಿಭಾಗ(ಡಾ.ಮುಹಮ್ಮದ್ ಯೂಸುಫ್, ಅನ್ವರ್ ಬಾಷಾ), ಸಂಸದ ವಿಭಾಗ(ಡಾ.ಸಯ್ಯದ್ ನಸೀರ್ ಹುಸೇನ್), ಶಾಸಕ ವಿಭಾಗ(ತನ್ವೀರ್ ಸೇಠ್, ಕನೀಝ್ ಫಾತಿಮಾ)ದಿಂದ ಚುನಾಯಿತರಾಗಿದ್ದಾರೆ. ಸರಕಾರದ ವತಿಯಿಂದ ಮಾಜಿ ಸಚಿವ ನಸೀರ್ ಅಹ್ಮದ್, ಮೌಲಾನ ಮಖ್ಸೂದ್ ಇಮ್ರಾನ್ ರಶಾದಿ, ಮೌಲಾನ ಮೀರ್ ಖಯ್ಯೂಮ್ ಅಬ್ಬಾಸ್ ಹಾಗೂ ಸರಕಾರಿ ಅಧಿಕಾರಿ ಅಶ್ರಫ್ ಉಲ್ ಹಸನ್‌ರನ್ನು ನಾಮ ನಿರ್ದೇಶನ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News