ವಿಜಯನಗರ ಪ್ರತ್ಯೇಕ ಜಿಲ್ಲೆ ಘೋಷಣೆಗೆ ಜನಪ್ರತಿನಿಧಿಗಳು, ಮಠಾಧೀಶರ ನಿಯೋಗ ಮನವಿ

Update: 2019-09-18 16:53 GMT

ಬೆಂಗಳೂರು, ಸೆ. 18: ಬಳ್ಳಾರಿ ಜಿಲ್ಲೆಯನ್ನು ವಿಭಾಗಿಸಿ ವಿಜಯನಗರ(ಹೊಸಪೇಟೆ)ವನ್ನು ಪ್ರತ್ಯೇಕ ಜಿಲ್ಲಾ ಕೇಂದ್ರವನ್ನಾಗಿ ಘೋಷಣೆ ಮಾಡಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪಗೆ ಜಿಲ್ಲೆ ಜನಪ್ರತಿನಿಧಿಗಳು ಮತ್ತು ಮಠಾಧೀಶರ ನಿಯೋಗ ಮನವಿ ಸಲ್ಲಿಸಿದೆ.

ಬುಧವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಉಜೈನಿ ಪೀಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿ ನೇತೃತ್ವದ ನಿಯೋಗದಲ್ಲಿ ಶಾಸಕ ಕಂಪ್ಲಿ ಗಣೇಶ್, ಮೇಲ್ಮನೆ ಸದಸ್ಯರಾದ ಅಲ್ಲಂ ವೀರಭದ್ರಪ್ಪ, ಕೆ.ಸಿ.ಕೊಂಡಯ್ಯ, ಅನರ್ಹ ಶಾಸಕ ಆನಂದ್ ಸಿಂಗ್, ಮಾಜಿ ಶಾಸಕ ನೇಮಿ ಚಂದ್ರನಾಯಕ್ ಮನವಿ ಸಲ್ಲಿಸಿದರು.

ವಿಜಯನಗರ(ಹೊಸಪೇಟೆ), ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ, ಕಂಪ್ಲಿ ಹಾಗೂ ಹೂವಿನಹಡಗಲಿ ಕ್ಷೇತ್ರಗಳನ್ನು ಒಳಗೊಂಡು ವಿಜಯನಗರವನ್ನು ಪ್ರತ್ಯೇಕ ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕೆಂದು ನಿಯೋಗ ಸಿಎಂಗೆ ಮನವಿ ಮಾಡಿದೆ. ಅನೇಕ ತಾಲೂಕುಗಳು ಜಿಲ್ಲಾ ಕೇಂದ್ರದಿಂದ ದೂರ ಇದೆ.

ಹೀಗಾಗಿ ಸಾಮಾನ್ಯ ಜನರು ತಮ್ಮ ದೈನಂದಿನ ವ್ಯವಹಾರಗಳಿಗೆ ಜಿಲ್ಲೆ ಕೇಂದ್ರಕ್ಕೆ ಬಂದು-ಹೋಗಲು ಕಷ್ಟವಾಗುತ್ತದೆ. ಆದುದರಿಂದ ವಿಜಯನಗರವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಿದರೆ ಈ 5 ತಾಲೂಕುಗಳಿಗೆ ಅನುಕೂಲವಾಗಲಿದೆ ಎಂದು ನಿಯೋಗ ಮನವಿ ಮಾಡಿದೆ.

ಆ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಉಜೈನಿ ಪೀಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿ, ವಿಜಯನಗರವನ್ನು ಜಿಲ್ಲೆಯನ್ನಾಗಿ ಮಾಡಬೇಕು ಎಂಬುದು ಈ ಭಾಗದ ಜನತೆಯ ಬಹುದಿನಗಳ ಬೇಡಿಕೆ. ನಮ್ಮ ಮನವಿಗೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಶೀಘ್ರ ಜಿಲ್ಲೆ ಘೋಷಣೆ ಭರವಸೆ ನೀಡಿರುವುದು ಸಂತಸ ತಂದಿದೆ ಎಂದರು.

ವಿಜಯನಗರವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡುವುದರಿಂದ ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ, ಕಂಪ್ಲಿ ಹಾಗೂ ಹೂವಿನಹಡಗಲಿ ಭಾಗದ ಜನರಿಗೆ ಹೆಚ್ಚಿನ ಅನುಕೂಲ. ಕೆಲವು ಗ್ರಾಮಗಳು ಜಿಲ್ಲಾ ಕೇಂದ್ರದಿಂದ 200 ಕಿ.ಮೀ. ದೂರದಲ್ಲಿವೆ. ಇದರಿಂದ ಜನರು ಕೆಲಸ ಕಾರ್ಯ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು.

ಬಳ್ಳಾರಿ ಅತಿದೊಡ್ಡ ಜಿಲ್ಲೆಯಾಗಿದ್ದು, 11 ತಾಲೂಕುಗಳಿವೆ. ಈ ಹಿಂದೆ ಬೇರೆ ಬೇರೆ ಜಿಲ್ಲೆಗಳನ್ನು ವಿಭಾಗಿಸಿ ಹೊಸ ಜಿಲ್ಲಾ ಕೇಂದ್ರಗಳನ್ನು ಘೋಷಣೆ ಮಾಡಲಾಗಿದೆ. ಇದೇ ಮಾದರಿಯಲ್ಲಿ ವಿಜಯನಗರವನ್ನು ಜಿಲ್ಲೆಯನ್ನಾಗಿ ಮಾಡಬೇಕೆಂದು ಮನವಿ ಮಾಡಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News