ನೂತನ ಟ್ರಾಫಿಕ್ ನಿಯಮ: 15 ದಿನದಲ್ಲಿ 3.2 ಲಕ್ಷ ಜನರಿಂದ ಡಿ.ಎಲ್.ಗೆ ಅರ್ಜಿ ಸಲ್ಲಿಕೆ

Update: 2019-09-18 17:07 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಸೆ.18: ಕೇಂದ್ರ ಸರಕಾರವು ಮೋಟರ್ ವಾಹನ ತಿದ್ದುಪಡಿ ಕಾಯ್ದೆಯನ್ನು ಜಾರಿ ಮಾಡಿದ ನಂತರ 15 ದಿನಗಳಲ್ಲಿ 3.2 ಲಕ್ಷ ಜನರು ಚಾಲನಾ ಪರವಾನಿಗೆ(ಡಿ.ಎಲ್.)ಗಾಗಿ ಅರ್ಜಿ ಸಲ್ಲಿಸಿದ್ದಾರೆ.

ಸೆಪ್ಟೆಂಬರ್ 1 ರಿಂದ 15 ರವರೆಗೆ ರಾಜ್ಯಾದ್ಯಂತ 3.2 ಲಕ್ಷ ಮಂದಿ ಅರ್ಜಿ ಸಲ್ಲಿಕೆ ಮಾಡಲಾಗಿದ್ದು, ಅರ್ಹರಿಗೆ ಡಿಎಲ್ ನೀಡಲಾಗಿದೆ ಎಂದು ಸಾರಿಗೆ ಇಲಾಖೆಯ ಜಂಟಿ ಆಯುಕ್ತ ಶಿವರಾಜ್ ಪಾಟೀಲ ತಿಳಿಸಿದ್ದಾರೆ.

ಸಂಚಾರ ನಿಯಮ ಉಲ್ಲಂಘಿಸುವವರಿಗೆ ವಿಧಿಸುವ ದಂಡದ ಮೊತ್ತ ಹೆಚ್ಚಳ ಮಾಡಿದಾಗಿನಿಂದ, ಚಾಲನಾ ಪರವಾನಿಗೆ ಸೇರಿ ವಿವಿಧ ದಾಖಲೆಗಳನ್ನು ಮಾಡಿಸಲು ಆರ್‌ಟಿಒ ಕಚೇರಿಗಳಲ್ಲಿ ಜನ ಮುಗಿಬೀಳುತ್ತಿದ್ದಾರೆ. ಸಾಮಾನ್ಯ ದಿನಗಳಲ್ಲಿ ತಿಂಗಳಿಗೆ 3.2 ಲಕ್ಷ ಡಿ.ಎಲ್ ಪಡೆಯುತ್ತಾರೆ. ಆದರೆ, ಸೆಪ್ಟೆಂಬರ್‌ನಲ್ಲಿ ಇದರ ಪ್ರಮಾಣ ಹೆಚ್ಚಾಗಿದೆ ಎಂದಿದ್ದಾರೆ.

ರಾಜ್ಯದ ಎಲ್ಲ ಆರ್‌ಟಿಒ ಕಚೇರಿ ಎದುರು ಜನಸಂದಣಿ ಕಂಡುಬರುತ್ತಿದೆ. ಡಿ.ಎಲ್‌ಗೆ ಅರ್ಹರಾದವರಿಗೆ ಸ್ಮಾರ್ಟ್‌ಕಾರ್ಡ್ ವಿತರಿಸಲಾಗುತ್ತಿದೆ. ಬೇಡಿಕೆಗೆ ತಕ್ಕಷ್ಟು ಸ್ಮಾರ್ಟ್‌ಕಾರ್ಡ್‌ಗಳನ್ನು ನೀಡುವಂತೆ ಪೂರೈಕೆದಾರರನ್ನು ಕೋರಿದ್ದೇವೆ ಎಂದು ಹೇಳಿದರು.

5 ಲಕ್ಷ ಪ್ರಮಾಣ ಪತ್ರ ವಿತರಣೆ: ವಾಹನಗಳ ಮಾಲಿನ್ಯ ತಪಾಸಣೆ ಮಾಡಿಸುವವರ ಸಂಖ್ಯೆಯೂ ಹೆಚ್ಚುತ್ತಿದೆ. ಬೆಂಗಳೂರಿನಲ್ಲಿ ಸೆಪ್ಟೆಂಬರ್ 1ರಿಂದ 15 ರವರೆಗೆ 5 ಲಕ್ಷಕ್ಕೂ ಅಧಿಕ ಜನರು ವಾಹನ ತಪಾಸಣೆ ಮಾಡಿಸಿದ್ದಾರೆ.

ಬೆಂಗಳೂರಿನಲ್ಲಿ 385 ವಾಯುಮಾಲಿನ್ಯ ತಪಾಸಣಾ ಕೇಂದ್ರಗಳಿವೆ. ಆಗಸ್ಟ್‌ನಲ್ಲಿ 2.35 ಲಕ್ಷ ಮಂದಿ ಪರೀಕ್ಷೆ ಮಾಡಿಸಿದ್ದರು. ಸೆಪ್ಟೆಂಬರ್ ಅಂತ್ಯಕ್ಕೆ 7.77 ಲಕ್ಷ ಆಗುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ತಪಾಸಣೆಗೆ ದ್ವಿಚಕ್ರ ವಾಹನಕ್ಕೆ 50, ಮೂರು ಚಕ್ರದ ವಾಹನಗಳಿಗೆ 60, ನಾಲ್ಕು ಚಕ್ರದ ಹಾಗೂ ಡೀಸೆಲ್ ವಾಹನಗಳಿಗೆ 125 ರೂ.ಗಳು ದರ ನಿಗದಿ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News