ವಾಹನ ಸವಾರರಿಗೆ ಕಲಿಕಾ ಪರವಾನಿಗೆಯೇ ಅಧಿಕೃತ ದಾಖಲೆ: ಹೈಕೋರ್ಟ್ ಆದೇಶ

Update: 2019-09-18 17:10 GMT

ಬೆಂಗಳೂರು, ಸೆ.18: ವಾಹನ ಸವಾರರಿಗೆ ನೀಡಲಾಗುವ ಕಲಿಕಾ ಪರವಾನಿಗೆಯನ್ನೂ(ಲರ್ನಿಂಗ್ ಲೈಸೆನ್ಸ್-ಎಲ್‌ಎಲ್) ಅಧಿಕೃತ ದಾಖಲೆ ಎಂದೇ ಪರಿಗಣಿಸಬೇಕೆಂದು ಹೈಕೋರ್ಟ್ ಆದೇಶಿಸಿದೆ.

ರಸ್ತೆ ಅಪಘಾತ ಪ್ರಕರಣವೊಂದರಲ್ಲಿ ಪರಿಹಾರಕ್ಕೆ ಸಂಬಂಧಿಸಿದ ಅರ್ಜಿ ವಿಲೇವಾರಿ ಮಾಡಿರುವ ನ್ಯಾ.ಆರ್.ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ತೀರ್ಪು ನೀಡಿದ್ದು, ತರಬೇತಿ ಪಡೆಯುತ್ತಿರುವ ಚಾಲಕನ ಜೊತೆ ತರಬೇತುದಾರ ಇರಲೇಬೇಕು ಎಂಬ ನಿಯಮ ನಾಲ್ಕು ಚಕ್ರಗಳ ವಾಹನಕ್ಕೆ ಮಾತ್ರ ಅನ್ವಯಿಸುತ್ತದೆ ಎಂದು ಹೇಳಿದೆ.

ತೀರ್ಪಿನಲ್ಲಿ ಏನಿದೆ: ಎಲ್‌ಎಲ್ ಹೊಂದಿರುವ ವ್ಯಕ್ತಿ ವಾಹನ ಚಲಾಯಿಸುವಾಗ ಅಪಘಾತಕ್ಕೀಡಾದರೆ ಅಂತಹ ವ್ಯಕ್ತಿಗೂ ವಿಮಾ ಕಂಪೆನಿಗಳು ಪರಿಹಾರ ನೀಡಬೇಕು. ಎಲ್‌ಎಲ್ ಹೊಂದಿದ ದ್ವಿಚಕ್ರ ವಾಹನ ಸವಾರರ ವಾಹನದ ಮೇಲೆ ಎಲ್ ಸಂಕೇತ ಹಾಕಿಕೊಂಡಿರಬೇಕು. ಆದರೆ, ನಾಲ್ಕು ಚಕ್ರಗಳ ವಾಹನ ಚಲಾಯಿಸುವಾಗ ಮಾತ್ರ ಎಲ್ ಸಂಕೇತ ಇರಬೇಕು ಅಂತೆಯೇ ಅವರೊಂದಿಗೆ ತರಬೇತುದಾರರು ಕಡ್ಡಾಯವಾಗಿ ಇರಬೇಕು ಎಂದು ತೀರ್ಪಿನಲ್ಲಿ ವಿವರಿಸಲಾಗಿದೆ.

ಪ್ರಕರಣವೇನು: ಬೆಳವಟ್ಟಿಯ ಸರಕಾರಿ ಮರಾಠಿ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿದ್ದ ಮಂಗಳಾ, 2009ರ ಮೇ 29ರಂದು ಅಂಜನಾ ಎಂಬುವರ ಜತೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಮಂಗಳಾ 10 ದಿನಗಳ ನಂತರ ಮರಣ ಹೊಂದಿದ್ದರು. ಮಂಗಳಾ ಅವರ ಆದಾಯದ ಆಧಾರದ ಮೇಲೆ ಅವರ ಪತಿ ಮತ್ತು ಪುತ್ರ ಬೆಳಗಾವಿಯ ತ್ವರಿತ ನ್ಯಾಯಾಲಯದ ಮೆಟ್ಟಿಲೇರಿ 20 ಲಕ್ಷ ಪರಿಹಾರ ನೀಡುವಂತೆ ಕೋರಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯ, 12.6 ಲಕ್ಷ ಪರಿಹಾರ ನೀಡುವಂತೆ ವಿಮಾ ಕಂಪೆನಿಗೆ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ವಿಮಾ ಕಂಪೆನಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ವಾಹನ ಚಲಾಯಿಸುತ್ತಿದ್ದ ಅಂಜನಾ ಕೇವಲ ಎಲ್‌ಎಲ್ ಮಾತ್ರ ಹೊಂದಿದ್ದರು. ಹೀಗಾಗಿ, ಪರಿಹಾರದ ಮೊತ್ತ ನೀಡಬೇಕಾಗಿಲ್ಲ ಎಂಬ ವಾದ ಮಂಡಿಸಿತ್ತು. ಇದನ್ನು ತಳ್ಳಿ ಹಾಕಿರುವ ನ್ಯಾಯಪೀಠ, ವಿಚಾರಣಾ ನ್ಯಾಯಾಲಯ ನಿಗದಿಪಡಿಸಿದ್ದ 12.6 ಲಕ್ಷ ಪರಿಹಾರ ಮೊತ್ತವನ್ನು 13.3 ಲಕ್ಷಕ್ಕೆ ಏರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News