ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಅಮಿತ್, ಕೌಶಿಕ್ ಸೆಮಿ ಫೈನಲ್‌ಗೆ ಲಗ್ಗೆ

Update: 2019-09-18 18:30 GMT

ಎಕಟೆರಿನ್‌ಬರ್ಗ್(ರಶ್ಯ), ಸೆ.18: ಏಶ್ಯನ್ ಗೇಮ್ಸ್ ಚಾಂಪಿಯನ್ ಅಮಿತ್ ಪಾಂಘಾಲ್(52 ಕೆಜಿ)ಹಾಗೂ ಮನೀಶ್ ಕೌಶಿಕ್(63 ಕೆಜಿ) ವಿಶ್ವ ಪುರುಷರ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಸೆಮಿ ಫೈನಲ್‌ಗೆ ಪ್ರವೇಶಿಸುವುದರೊಂದಿಗೆ ಭಾರತ ಎರಡು ಪದಕವನ್ನು ದೃಢಪಡಿಸಿದೆ.

ಇಲ್ಲಿ ಬುಧವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ದ್ವಿತೀಯ ಶ್ರೇಯಾಂಕದ ಪಾಂಘಾಲ್ ಹಾಲಿ ಏಶ್ಯನ್ ಚಾಂಪಿಯನ್ ಫಿಲಿಪ್ಪೈನ್ಸ್ ನ ಕಾರ್ಲೊ ಪಾಲಂರನ್ನು 4-1 ಅಂತರದಿಂದ ಮಣಿಸಿದರು. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿರುವ ಮನೀಶ್ ಕೌಶಿಕ್ ಬ್ರೆಝಿಲ್‌ನ ವಾಂಡರ್ಸನ್ ಡಿ ಒಲಿವೆರಾರನ್ನು 5-0 ಅಂತರದಿಂದ ಮಣಿಸಿದರು. ಈ ಗೆಲುವಿನ ಮೂಲಕ ಇಬ್ಬರು ಬಾಕ್ಸರ್‌ಗಳು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚೊಚ್ಚಲ ಪದಕವನ್ನು ಖಚಿತಪಡಿಸಿದರು.

ಅಮಿತ್ ಕಳೆದ ವರ್ಷ ನಡೆದ ಏಶ್ಯನ್ ಗೇಮ್ಸ್ ಸೆಮಿ ಫೈನಲ್‌ನಲ್ಲಿ ಪಾಲಮ್‌ರನ್ನು ಸೋಲಿಸಿದ್ದರು. ವೇಗದ ದಾಳಿಯ ಮೂಲಕ ತನ್ನ ಮುಖದಲ್ಲಿ ಬದ್ಧತೆ ತೋರ್ಪಡಿಸಿದ ಅಮಿತ್ 4-1 ಅಂತರದಿಂದ ಜಯ ಸಾಧಿಸಿ ಈ ವರ್ಷದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಮೊದಲ ಪದಕವನ್ನು ದೃಢಪಡಿ ಸಿದರು.

ಅಂತಿಮ ನಾಲ್ಕರ ಸುತ್ತಿನಲ್ಲಿ ಹರ್ಯಾಣದ ಬಾಕ್ಸರ್ ಅಮಿತ್ ಕಝಖ್‌ಸ್ತಾನದ ಸಾಕೆನ್ ಬಿಬೊಸ್ಸಿನೊವ್ ಸವಾಲು ಎದುರಿಸಲಿದ್ದಾರೆ. ಮತ್ತೊಂದು ಕ್ವಾರ್ಟರ್ ಫೈನಲ್‌ನಲ್ಲಿ ಸಾಕೆನ್ ಅಮೇನಿಯದ ಯುರೋಪಿಯನ್ ಚಾಂಪಿಯನ್ ಹಾಗೂ ಆರನೇ ಶ್ರೇಯಾಂಕದ ಅರ್ತರ್ ಹೊಹಾನಿಸಿಯಾನ್‌ರನ್ನು ಮಣಿಸಿದರು.

ಕಳೆದ ಆವೃತ್ತಿಯ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದ ಅಮಿತ್ 49 ಕೆಜಿ ತೂಕ ವಿಭಾಗದಲ್ಲಿ ಹಾಲಿ ಚಾಂಪಿಯನ್ ಹಸನ್‌ಬೊಯ್ ಡುಸ್ಮಟೊವ್ ಎದುರು ಶರಣಾಗಿದ್ದರು.

 ಮಾಜಿ ರಾಷ್ಟ್ರೀಯ ಚಾಂಪಿಯನ್ ಕೌಶಿಕ್ ಸೆಮಿ ಫೈನಲ್‌ನಲ್ಲಿ ಕ್ಯೂಬಾದ ಅಗ್ರ ಶ್ರೇಯಾಂಕದ ಆ್ಯಂಡಿ ಗೊಮೆಝ್ ಕ್ರೂಝ್‌ರಿಂದ ಕಠಿಣ ಸವಾಲು ಎದುರಿಸಲಿದ್ದಾರೆ. ಕ್ರೂಝ್ ರಶ್ಯದ ಇಲಿಯಾ ಪೊಪೊವ್‌ರನ್ನು ಮಣಿಸಿ ಅಂತಿಮ-4ರ ಘಟ್ಟ ತಲುಪಿದ್ದಾರೆ. ಲೈಟ್ ವೆಲ್ಟರ್‌ವೇಟ್(64ಕೆಜಿ)ವಿಭಾಗದಲ್ಲಿ 2017ರ ಆವೃತ್ತಿಯಲ್ಲಿ ಚಿನ್ನ ಜಯಿಸಿದ್ದರು. ಎರಡು ಬಾರಿ ಪಾನ್ ಅಮೆರಿಕ ಗೇಮ್ಸ್‌ನಲ್ಲಿ ಬಂಗಾರ ಗೆದ್ದುಕೊಂಡಿದ್ದರು.

ಭಾರತ ಈ ತನಕ ಒಂದೇ ಆವೃತ್ತಿಯ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಒಂದಕ್ಕಿಂತ ಹೆಚ್ಚು ಪದಕವನ್ನು ಜಯಿಸಿಲ್ಲ. ಒಟ್ಟಾರೆ ಭಾರತದ ನಾಲ್ಕು ಬಾರಿ ಕಂಚಿನ ಪದಕವನ್ನು ಜಯಿಸಿದೆ. ವಿಜೇಂದರ್ ಸಿಂಗ್(2009), ವಿಕಾಸ್ ಕ್ರಿಶನ್(2011), ಶಿವ ಥಾಪ(2015) ಹಾಗೂ ಗೌರವ್ ಬಿಧುರಿ(2017)ಕಂಚಿನ ಪದಕ ತನ್ನದಾಗಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News