ತನ್ನ ವೈಯಕ್ತಿಕ ಜೀವನದ ಕುರಿತ ಲೇಖನ ಬರೆದಿರುವ ದಿನಪತ್ರಿಕೆ ವಿರುದ್ಧ ಸ್ಟೋಕ್ಸ್ ವಾಗ್ದಾಳಿ

Update: 2019-09-19 11:31 GMT

ಲಂಡನ್, ಸೆ.18: ತನ್ನ ವೈಯಕ್ತಿಕ ಜೀವನ ಹಾಗೂ ಕುಟುಂಬದ ಕುರಿತು ವಿವರವನ್ನು ಪ್ರಕಟಿಸಿರುವ ಇಂಗ್ಲೆಂಡ್‌ನ ದಿನಪತ್ರಿಕೆ ‘ದಿ ಸನ್’ ವಿರುದ್ಧ ಮಂಗಳವಾರ ವಾಗ್ದಾಳಿ ನಡೆಸಿರುವ ಇಂಗ್ಲೆಂಡ್‌ನ ಆಲ್‌ರೌಂಡರ್ ಬೆನ್ ಸ್ಟೋಕ್ಸ್, ಪತ್ರಿಕೆಯ ಈ ವರ್ತನೆ ‘ಸಂಪೂರ್ಣ ಅಸಹ್ಯಕರ’ ಹಾಗೂ ‘ಇದೊಂದು ಕೀಳುಮಟ್ಟದ ಪತ್ರಿಕೋದ್ಯಮ’ ಎಂದು ಜರಿದಿದ್ದಾರೆ.

 ಪತ್ರಿಕೆಯು ತೀರಾ ವೈಯಕ್ತಿಕ ಹಾಗೂ ಆಘಾತಕಾರಿ ಅಂಶವನ್ನು ತನ್ನ ಲೇಖನದಲ್ಲಿ ಬರೆದಿದ್ದು, 30 ವರ್ಷಗಳಿಂದ ನ್ಯೂಝಿಲ್ಯಾಂಡ್‌ನಲ್ಲಿರುವ ನನ್ನ ಕುಟುಂಬದ ಮೇಲೆ ಇದರಿಂದ ಪರಿಣಾಮ ಬೀರಿದೆ. ವರದಿಯಲ್ಲಿ ತಪ್ಪುಗಳಿದ್ದು, ಇದು ಹಾನಿಗೆ ಕಾರಣವಾಗುತ್ತದೆ. ಇಂತಹ ವಿವರಗಳು ನನ್ನ ತಾಯಿಗೆ ಜೀವನ ಪರ್ಯಂತ ಪರಿಣಾಮ ಬೀರಲಿದೆ. ನನ್ನ ಹೆಸರನ್ನು ಬಳಸಿಕೊಂಡು ನನ್ನ ಹೆತ್ತವರ ಖಾಸಗಿತನವನ್ನು ಬಹಿರಂಗಪಡಿಸುವುದು ಅತ್ಯಂತ ಅಸಹ್ಯಕರವಾಗಿದೆ ಎಂದು ಸ್ಟೋಕ್ಸ್ ಹೇಳಿದ್ದಾರೆ.

ಇಂಗ್ಲೆಂಡ್ ತಂಡ ಮೊದಲ ಬಾರಿ ಏಕದಿನ ವಿಶ್ವಕಪ್ ಜಯಿಸಲು ಪ್ರಮುಖ ಪಾತ್ರವಹಿಸಿದ್ದ ಸ್ಟೋಕ್ಸ್ ಕಳೆದ ತಿಂಗಳು ಹೆಡ್ಡಿಂಗ್ಲೆಯಲ್ಲಿ ನಡೆದ ಆ್ಯಶಸ್ ಸರಣಿಯ ಮೂರನೇ ಪಂದ್ಯದಲ್ಲಿ ಔಟಾಗದೆ 135 ರನ್ ಗಳಿಸಿ ಇಂಗ್ಲೆಂಡ್ ಸರಣಿಯನ್ನು ಅಂತಿಮವಾಗಿ 2-2ರಿಂದ ಸಮಬಲಗೊಳಿಸಲು ನೆರವಾಗಿದ್ದರು.

‘‘ನನ್ನ ಸಾರ್ವಜನಿಕ ವ್ಯಕ್ತಿಚಿತ್ರ ನನಗೆ ಪರಿಣಾಮಬೀರಲಿದೆ ಎಂದು ಗೊತ್ತಿದೆ.ಆದರೆ, ಸಾರ್ವಜನಿಕ ವ್ಯಕ್ತಿಚಿತ್ರದ ಮೂಲಕ ನನ್ನ ಹೆತ್ತವರು, ನನ್ನ ಪತ್ನಿ, ನನ್ನ ಮಕ್ಕಳು ಹಾಗೂ ಕುಟುಂಬದ ಇತರ ಸದಸ್ಯರ ಹಕ್ಕನ್ನು ಆಕ್ರಮಿಸಲು ಬಳಸಲು ಬಿಡುವುದಿಲ್ಲ. ಅವರೆಲ್ಲರೂ ತಮ್ಮದೇ ಖಾಸಗಿ ಜೀವನಕ್ಕೆ ಅರ್ಹರಿದ್ದಾರೆ. ಮೂರು ದಶಕಗಳಿಗಿಂತಲೂ ಹೆಚ್ಚು ಕಾಲ ಈ ಘಟನೆಗಳೊಂದಿಗೆ ಅನಿವಾರ್ಯವಾಗಿ ಸಂಬಂಧಿಸಿರುವ ಖಾಸಗಿ ಆಘಾತವನ್ನು ಎದುರಿಸಲು ನನ್ನ ಕುಟುಂಬ ಶ್ರಮಿಸಿದೆ. ತೀರಾ ವೈಯಕ್ತಿಕ ವಿಚಾರ ಖಾಸಗಿಯಾಗಿಡಲು ಹೆಚ್ಚಿನ ಕಾಳಜಿವಹಿಸಿದೆ ಎಂದು ಸ್ಟೋಕ್ಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News