ತೈಲ ಘಟಕದ ಮೇಲೆ ದಾಳಿ: ಇರಾನ್‌ನತ್ತ ಬೆಟ್ಟು ಮಾಡಿದ ಸೌದಿ

Update: 2019-09-19 03:33 GMT

ರಿಯಾದ್, ಸೆ.19: ದೇಶದ ಪ್ರಮುಖ ತೈಲ ಉತ್ಪಾದನಾ ಘಟಕದ ಮೇಲೆ ವಾರಾಂತ್ಯದಲ್ಲಿ ನಡೆದ ದಾಳಿಯನ್ನು ಇರಾನ್ ಪ್ರಾಯೋಜಿಸಿರುವುದರಲ್ಲಿ ಯಾವ ಸಂದೇಹವೂ ಇಲ್ಲ ಎಂದು ಸೌದಿ ಅರೇಬಿಯಾ ಪ್ರತಿಪಾದಿಸಿದೆ. ಆದರೆ ಇರಾನ್ ಅಥವಾ ಇಸ್ಲಾಮಿಕ್ ದೇಶ ದಾಳಿ ನಡೆಸಿದೆ ಎಂದು ನೇರವಾಗಿ ಹೇಳಿಲ್ಲ.

ಅಬ್‌ಖೈಖ್ ಮತ್ತು ಖುರೈಸ್ ದಾಳಿ ಸ್ಥಳಗಳಿಂದ ವಶಪಡಿಸಿಕೊಂಡ ಡ್ರೋನ್ ಮತ್ತು ಕ್ಷಿಪಣಿಯ ಅವಶೇಷಗಳನ್ನು ಪ್ರದರ್ಶಿಸಿದ ಸೌದಿ ಅರೇಬಿಯಾದ ರಕ್ಷಣಾ ಸಚಿವಾಲಯ ವಕ್ತಾರ ಟರ್ಕಿ ಅಲ್ ಮಾಲಿಕಿ, ಈ ದಾಳಿಯನ್ನು ಉತ್ತರದ ಕಡೆಯಿಂದ ನಡೆಸಲಾಗಿದೆ ಹಾಗೂ ಹೌತಿ ಬಂಡುಕೋರರು ಹೊಣೆ ಹೊತ್ತಂತೆ ಇದನ್ನು ಯೆಮನ್‌ನ ಇರಾನ್ ಬೆಂಬಲಿತ ಹೌತಿ ಬಂಡುಕೋರರು ನಡೆಸಿಲ್ಲ ಎನ್ನುವುದು ನಕ್ಷೆಯಿಂದ ಸ್ಪಷ್ಟವಾಗಿ ತಿಳಿಯುತ್ತದೆ ಎಂದು ಸ್ಪಷ್ಟಪಡಿಸಿದರು.

ಒಟ್ಟು 25 ಪೈಲಟ್ ರಹಿತ ವಿಮಾನಗಳು ಮತ್ತು ಯುದ್ಧ ಕ್ಷಿಪಣಿಗಳನ್ನು ಎರಡು ಸ್ಥಳಗಳ ಮೇಲಿನ ದಾಳಿಗೆ ಬಳಸಲಾಗಿದೆ. ಶಸ್ತ್ರಾಸ್ತ್ರಗಳು ಇರಾನ್ ಮೂಲದ್ದಾಗಿದ್ದು, ನಿಖರವಾಗಿ ಎಲ್ಲಿಂದ ಉಡಾಯಿಸಲಾಗಿದೆ ಎನ್ನುವುದನ್ನು ಪತ್ತೆ ಮಾಡಲಾಗುತ್ತಿದೆ. ಶಸ್ತ್ರಾಸ್ತ್ರಗಳ ವ್ಯಾಪ್ತಿ ಮತ್ತು ನಿಖರತೆ ಹೌತಿ ಬಂಡುಕೋರರ ಸಾಮರ್ಥ್ಯಕ್ಕೆ ನಿಲುಕುವಂಥದ್ದಲ್ಲ ಎಂದು ಪ್ರತಿಪಾದಿಸಿದರು.

ಯೆಮನ್‌ನಿಂದ ದಾಳಿ ನಡೆದಿದೆ ಎಂದು ಬಿಂಬಿಸುವ ಪ್ರಯತ್ನವನ್ನು ಇರಾನ್ ಮಾಡುತ್ತಿದ್ದರೂ, ದಾಳಿ ಯೆಮನ್‌ನಿಂದ ನಡೆದಿಲ್ಲ. ದಾಳಿ ಸ್ಥಳದ ದತ್ತಾಂಶ ವಿಶ್ಲೇಷಣೆಯಿಂದ ತಿಳಿದುಬರುವಂತೆ ಈ ಶಸ್ತ್ರಾಸ್ತ್ರಗಳು ಇರಾನ್ ಮೂಲದವುಗಳು" ಎಂದು ಹೇಳಿದರು. ಸೌದಿ ಅರೇಬಿಯಾ ಇತಿಹಾಸದಲ್ಲೇ ನಡೆದ ಅತ್ಯಂತ ಭೀಕರ ದಾಳಿಯಲ್ಲಿ ತನ್ನ ಕೈವಾಡ ಇಲ್ಲ ಎಂದು ಇರಾನ್ ಹೇಳಿಕೊಂಡಿದೆ. ತಮ್ಮ ದೇಶ ಯುದ್ಧ ಬಯಸುವುದಿಲ್ಲ ಎಂದು ಅಧ್ಯಕ್ಷ ಹಸನ್ ರೊಹಾನಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News