ಟ್ವೆಂಟಿ-20: ರೋಹಿತ್ ಗರಿಷ್ಠ ಸ್ಕೋರ್ ದಾಖಲೆ ಮುರಿದ ವಿರಾಟ್ ಕೊಹ್ಲಿ

Update: 2019-09-19 06:56 GMT

 ಹೊಸದಿಲ್ಲಿ, ಸೆ.19: ಭಾರತದ ನಾಯಕ ವಿರಾಟ್ ಕೊಹ್ಲಿ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಸಾರ್ವಕಾಲಿಕ ಶ್ರೇಷ್ಠ ಸ್ಕೋರರ್ ಆಗಿ ಹೊರಹೊಮ್ಮಿದ್ದಾರೆ. ಈಮೂಲಕ ಸಹ ಆಟಗಾರ ರೋಹಿತ್ ಶರ್ಮಾರ ಅವರ ದಾಖಲೆಯೊಂದನ್ನು ಮುರಿದಿದ್ದಾರೆ.

ಮೊಹಾಲಿಯಲ್ಲಿ ಬುಧವಾರ ರಾತ್ರಿ ನಡೆದ ಎರಡನೇ ಅಂತರ್‌ರಾಷ್ಟ್ರೀಯ ಟ್ವೆಂಟಿ-20 ಟೂರ್ನಮೆಂಟ್‌ನಲ್ಲಿ ಕೊಹ್ಲಿ ಈ ಸಾಧನೆ ಮಾಡಿದ್ದಾರೆ. ಕೊಹ್ಲಿ ಬಳಗ ದ.ಆಫ್ರಿಕ ವಿರುದ್ದ ಮೊದಲ ಪಂದ್ಯವನ್ನು ಏಳು ವಿಕೆಟ್‌ಗಳಿಂದ ಗೆದ್ದುಕೊಂಡಿದೆ. 52 ಎಸೆತಗಳಲ್ಲಿ 72 ರನ್ ಗಳಿಸಿದ ಕೊಹ್ಲಿ ಟೀಮ್ ಇಂಡಿಯಾ 19ನೇ ಓವರ್‌ನಲ್ಲಿ 149 ರನ್ ಗಳಿಸಲು ನೆರವಾಗಿದ್ದಾರೆ.

52 ಎಸೆತಗಳಲ್ಲಿ 4 ಬೌಂಡರಿ ಹಾಗೂ ಮೂರು ಸಿಕ್ಸರ್ ಸಿಡಿಸಿದ ಕೊಹ್ಲಿ ಟ್ವೆಂಟಿ-20ಯಲ್ಲಿ ಗರಿಷ್ಠ ಸ್ಕೋರ್ ಗಳಿಸಿದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದ ರೋಹಿತ್ ಶರ್ಮಾರನ್ನು ಹಿಂದಿಕ್ಕಿದ್ದಾರೆ. ದ.ಆಫ್ರಿಕ ವಿರುದ್ಧ ಪಂದ್ಯಕ್ಕಿಂತ ಮೊದಲು ರೋಹಿತ್ 96 ಪಂದ್ಯಗಳಲ್ಲಿ 32.72ರ ಸರಾಸರಿಯಲ್ಲಿ 2,422 ರನ್ ಗಳಿಸಿ ಸಾರ್ವಕಾಲಿಕ ಶ್ರೇಷ್ಠ ಸ್ಕೋರರ್ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದರು.

ಕೊಹ್ಲಿ 70 ಪಂದ್ಯಗಳಲ್ಲಿ 49.35ರ ಸರಾಸರಿಯಲ್ಲಿ 2,369 ರನ್ ಗಳಿಸಿ ದ್ವಿತೀಯ ಸ್ಥಾನದಲ್ಲಿದ್ದರು.
ಇದೀಗ 71 ಪಂದ್ಯಗಳಲ್ಲಿ 2,441 ರನ್ ಗಳಿಸಿರುವ ಕೊಹ್ಲಿ 50ಕ್ಕೂ ಅಧಿಕ ಸರಾಸರಿ ಕಾಯ್ದುಕೊಂಡಿದ್ದಾರೆ. ರೋಹಿತ್ 97 ಪಂದ್ಯಗಳಲ್ಲಿ 4 ಶತಕಗಳ ಸಹಿತ 2,434 ರನ್ ಗಳಿಸಿದ್ದಾರೆ. ಕೊಹ್ಲಿ ಎಲ್ಲ ಮೂರು ಮಾದರಿ ಕ್ರಿಕೆಟ್‌ನಲ್ಲಿ 50 ಸರಾಸರಿ ಕಾಯ್ದುಕೊಂಡಿರುವ ಏಕೈಕ ಬ್ಯಾಟ್ಸ್‌ಮನ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News