ಎನ್‌ಡಿಎ ಮೈತ್ರಿಕೂಟ ವಿಸರ್ಜಿಸಿ: ಬಿಜೆಪಿ ಅಧ್ಯಕ್ಷ ಅಮಿತ್‌ ಶಾಗೆ ವಿ.ಎಸ್.ಉಗ್ರಪ್ಪ ಸವಾಲು

Update: 2019-09-19 15:59 GMT

ಬೆಂಗಳೂರು, ಸೆ.19: ಬಹುಪಕ್ಷಗಳ ವ್ಯವಸ್ಥೆ ದೇಶಕ್ಕೆ ಅಪಾಯಕಾರಿ ಎಂದು ಹೇಳಿಕೆ ನೀಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ, ತಮ್ಮ ಅಧ್ಯಕ್ಷತೆಯಲ್ಲಿರುವ 23 ಪಕ್ಷಗಳನ್ನು ಒಳಗೊಂಡ ಎನ್‌ಡಿಎ ಮೈತ್ರಿಕೂಟವನ್ನು ತಕ್ಷಣವೇ ವಿಸರ್ಜಿಸಲಿ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಸವಾಲು ಹಾಕಿದರು.

ಗುರುವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಲೋಕಸಭೆಯಲ್ಲಿ 545 ಸಂಸದರ ಪೈಕಿ ಎನ್‌ಡಿಎ ಮೈತ್ರಿಕೂಟ 354(ಬಿಜೆಪಿ 303), ರಾಜ್ಯಸಭೆಯ 245 ಸಂಸದರ ಪೈಕಿ ಎನ್‌ಡಿಎ ಮೈತ್ರಿಕೂಟ 115(ಬಿಜೆಪಿ 79) ಸ್ಥಾನಗಳನ್ನು ಹೊಂದಿದೆ. ಬಹುಪಕ್ಷಗಳು ದೇಶಕ್ಕೆ ಮಾರಕವಾಗಿದ್ದರೆ ಸಮಯ ವ್ಯರ್ಥ ಮಾಡದೆ ಎನ್‌ಡಿಎ ಮೈತ್ರಿಕೂಟ ವಿಸರ್ಜನೆ ಮಾಡಿ ಎಂದು ಆಗ್ರಹಿಸಿದರು.

ನಾಝಿ ಪಕ್ಷವು ವಿಶ್ವಕಂಡ ಕ್ರೂರ ಆಡಳಿತಗಾರ ಹಿಟ್ಲರ್‌ನನ್ನು ಏಕಮೇವ ನಾಯಕನಂತೆ ಬಿಂಬಿಸಲು ಒಂದು ರಾಷ್ಟ್ರ, ಒಬ್ಬ ನಾಯಕ ಎಂಬ ಘೋಷಣೆಗಳನ್ನು ಕೊಟ್ಟಿತ್ತು. ನಮ್ಮ ದೇಶದಲ್ಲಿ ಒಂದು ರಾಷ್ಟ್ರ, ಒಂದು ಧ್ವಜ, ಒಂದು ಚುನಾವಣೆ, ಒಬ್ಬ ನಾಯಕ, ಒಂದು ಧರ್ಮ ಎಂಬ ಘೋಷಣೆಗಳ ಮೂಲಕ ನರೇಂದ್ರ ಮೋದಿಯನ್ನು ಏಕಮೇವ ನಾಯಕನಂತೆ ಬಿಂಬಿಸಲು ಅಮಿತ್ ಶಾ ಪ್ರಯತ್ನಿಸುತ್ತಿದ್ದಾರೆ ಎಂದು ಉಗ್ರಪ್ಪ ದೂರಿದರು.

ಒಂದು ಕಡೆ ನರೇಂದ್ರ ಮೋದಿಯನ್ನು ಬಿಂಬಿಸುವುದು, ಮತ್ತೊಂದೆಡೆ ಪ್ರಜಾಪ್ರಭುತ್ವ ವ್ಯವಸ್ಥೆ, ಸಂವಿಧಾನಕ್ಕೆ ಅಪಚಾರಗೊಳಿಸಿ, ಸರ್ವಾಧಿಕಾರ ವ್ಯವಸ್ಥೆಯನ್ನು ಜಾರಿಗೆ ತರುವ ಹುನ್ನಾರ ನಡೆಯುತ್ತಿದೆ. ಇವರ ಷಡ್ಯಂತ್ರಗಳು, ರಾಜಕೀಯ ಪಿತೂರಿಗಳನ್ನು ಜನ ಅರ್ಥ ಮಾಡಿಕೊಂಡಿದ್ದು, ಅವರೇ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದು ಅವರು ಹೇಳಿದರು.

ದೇಶದ ಆರ್ಥಿಕ ಸ್ಥಿತಿ ಕುಸಿದಿದೆ, ಜಿಡಿಪಿ ಶೇ.5ಕ್ಕೆ ಇಳಿದಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ನಿರಂತರವಾಗಿ ಕುಸಿಯುತ್ತಿದೆ. ಪೆಟ್ರೋಲ್, ಡಿಸೇಲ್ ಬೆಲೆಗಳು ಹೆಚ್ಚುತ್ತಿವೆ. ದೇಶ ಎದುರಿಸುತ್ತಿರುವ ನೈಜ ಸಮಸ್ಯೆಗಳನ್ನು ಮರೆ ಮಾಚಲು ಬಿಜೆಪಿ ಹೊರಟಿದೆ ಎಂದು ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯಕ್ಕೆ ಅಪಮಾನ: ರಾಜ್ಯದಲ್ಲಿ ಒಂದು ಕಡೆ ಅತಿವೃಷ್ಟಿ, ಇನ್ನೊಂದು ಕಡೆ ಅನಾವೃಷ್ಟಿ. ಒಂದು ಲಕ್ಷ ಕೋಟಿ ರೂ.ಗಳಷ್ಟು ನಷ್ಟವಾಗಿದೆ. ಸರಕಾರ 38,500 ಕೋಟಿ ರೂ.ಎಂದು ಅಂದಾಜು ಮಾಡಿ ಕಳುಹಿಸಿದ್ದರೆ, ಅದನ್ನು ಕೇಂದ್ರ ಸರಕಾರ ತಿರಸ್ಕರಿಸಿತು. ಎರಡನೆ ಬಾರಿ 35 ಸಾವಿರ ಕೋಟಿ ರೂ.ನಷ್ಟ ಪರಿಷ್ಕರಿಸಿ ವರದಿ ಸಲ್ಲಿಸಲಾಯಿತು ಎಂದು ಅವರು ಹೇಳಿದರು.

ರಾಜ್ಯದ ಪರಿಸ್ಥಿತಿ ವಿವರಿಸಲು ಮುಖ್ಯಮಂತ್ರಿ ಹಲವು ಬಾರಿ ಮನವಿ ಮಾಡಿದರೂ, ಭೇಟಿಗೆ ಪ್ರಧಾನಿ ಕಾಲಾವಕಾಶ ನೀಡುತ್ತಿಲ್ಲ. ರಾಜ್ಯದ ಜನತೆಯ ಪ್ರತಿನಿಧಿಯಾಗಿರುವ ಮುಖ್ಯಮಂತ್ರಿಯನ್ನು ನಡೆಸಿಕೊಳ್ಳುವ ರೀತಿ ಇದಲ್ಲ. ಪ್ರಧಾನಿಯಲ್ಲಿ ಸರ್ವಾಧಿಕಾರಿ ಮನೋಭಾವನೆ ಕಂಡು ಬರುತ್ತದೆ. ಇದು ಕೇವಲ ಯಡಿಯೂರಪ್ಪಗೆ ಆದ ಅವಮಾನವಲ್ಲ, ಇಡೀ ರಾಜ್ಯಕ್ಕೆ ಆದ ಅವಮಾನ ಎಂದು ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಉಪ ಮುಖ್ಯಮಂತ್ರಿಗಳು, ಕಂದಾಯ, ಗೃಹ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾಗಲಿ ಯಾರೊಬ್ಬರೂ ಬರ ಹಾಗೂ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ಕಾರ್ಯಗಳನ್ನು ಸಮರ್ಪಕವಾಗಿ ಕೈಗೊಳ್ಳುವಲ್ಲಿ ವಿಫಲವಾಗಿದ್ದಾರೆ ಎಂದು ಅವರು ದೂರಿದರು.

ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ಬಳ್ಳಾರಿ, ರಾಯಚೂರು, ಗುಲ್ಬರ್ಗ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿನ ಬರಪೀಡಿತ ತಾಲೂಕುಗಳನ್ನು ಗುರುತಿಸಲು ಈ ಸರಕಾರಕ್ಕೆ ಈವರೆಗೆ ಸಾಧ್ಯವಾಗಿಲ್ಲ. ಕುಡಿಯುವ ನೀರು ಹಾಗೂ ಮೇವಿನ ಕೊರತೆಯನ್ನು ಈ ಜಿಲ್ಲೆಗಳು ಎದುರಿಸುತ್ತಿವೆ ಎಂದು ಉಗ್ರಪ್ಪ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News