ಪತ್ರಕರ್ತರಿಗೆ ಹೆಲ್ತ್‌ಕಾರ್ಡ್ ವಿತರಣೆಗೆ ಕ್ರಮ: ಮುಖ್ಯಮಂತ್ರಿ ಯಡಿಯೂರಪ್ಪ
ಬೆಂಗಳೂರು, ಸೆ. 19: ಕಾರ್ಯನಿರತ ಪತ್ರಕರ್ತರಿಗೆ ಉಚಿತ ಚಿಕಿತ್ಸೆ ಪಡೆಯಲು ತಕ್ಷಣವೆ ಹೆಲ್ತ್‌ಕಾರ್ಡ್ ಹಾಗೂ ಅಕಾಲಿಕ ಮರಣಕ್ಕೆ ತುತ್ತಾಗುವ ಕಾರ್ಯನಿರತ ಪತ್ರಕರ್ತರ ಕುಟುಂಬಕ್ಕೆ ಪರಿಹಾರ ನೀಡಲು ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಇಂದಿಲ್ಲಿ ಭರವಸೆ ನೀಡಿದ್ದಾರೆ.
ಗುರುವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಶಿವಾನಂದ ತಗಡೂರು ನೇತೃತ್ವದಲ್ಲಿ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ ಯಡಿಯೂರಪ್ಪ, ಜಿಲ್ಲಾ ಮಟ್ಟದ ಪತ್ರಕರ್ತರಿಗೆ ಉಚಿತ ಬಸ್ ಪಾಸ್, ಪತ್ರಕರ್ತರ ಪಿಂಚಣಿ ಪಡೆಯಲು ಅಡ್ಡಿಯಾಗಿರುವ ನಿಯಮಾವಳಿಗಳನ್ನು ಸರಳೀಕರಿಸಿ, ಆರ್ಥಿಕವಾಗಿ ಹಿಂದುಳಿದ ಪತ್ರಕರ್ತರಿಗೆ ವಸತಿ ಯೋಜನೆಯಡಿ ಮನೆ ಹಾಗೂ ಎಲ್ಲ ವರ್ಗದ ಆರ್ಥಿಕವಾಗಿ ಹಿಂದುಳಿದ ಪತ್ರಕರ್ತರಿಗೆ ಮೀಡಿಯಾ ಕಿಟ್ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಸಂಘದಿಂದ ಸಿಎಂ ಪರಿಹಾರ ನಿಧಿಗೆ 1ಲಕ್ಷ ರೂ.ಚೆಕ್ ಅನ್ನು ಸಿಎಂಗೆ ಸಲ್ಲಿಸಲಾಯಿತು. ಈ ವೇಳೆ ರಾಷ್ಟ್ರಿಯ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ, ಲೋಕೇಶ್, ಸಂಜೀವರಾವ ಕುಲಕರ್ಣಿ, ಡಾ.ಉಮೇಶ್ವರ, ಮಲ್ಲಿಕಾರ್ಜುನ ಬಂಗಲೆ ಸೇರಿದಂತೆ ಪದಾಧಿಕಾರಿಗಳು ಹಾಜರಿದ್ದರು.