ವ್ಯಾಟಿಕನ್: ಪೋಪ್ ಫ್ರಾನ್ಸಿಸ್ ರನ್ನು ಭೇಟಿಯಾದ ಬೆಂಗಳೂರಿನ ಆರ್ಚ್ ಬಿಷಪ್ ಪೀಟರ್ ಮಚಾದೊ ನೇತೃತ್ವದ ಬಿಷಪರ ನಿಯೋಗ

Update: 2019-09-19 16:16 GMT

ಬೆಂಗಳೂರು, ಸೆ.19: ಬೆಂಗಳೂರಿನ ಆರ್ಚ್ ಬಿಷಪ್ ಪೀಟರ್ ಮಚಾದೋ ನೇತೃತ್ವದ ಕರ್ನಾಟಕ ಬಿಷಪರ ನಿಯೋಗ ಸೆಪ್ಟೆಂಬರ್ 17 ರಂದು ರೋಮ್ ನ ವ್ಯಾಟಿಕನ್ ನಲ್ಲಿ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿಯಾಗಿದ್ದಾರೆ.

ಈ ಸಂದರ್ಭದಲ್ಲಿ ನಿಯೋಗದ ಜೊತೆ ಸವಿವರವಾಗಿ ಮಾತನಾಡಿ ಕನ್ನಡಿಗರಿಗೆ ಶುಭ ಹಾರೈಸಿದ ಪೋಪ್ ಫ್ರಾನ್ಸಿಸ್ ಅವರು, ಬಿಷಪರ ಧಾರ್ಮಿಕ ಹಾಗು ಸೇವಾ ಚಟುವಟಿಕೆಗಳಿಗೆ ಅಭಿನಂದನೆ ಸಲ್ಲಿಸಿ ಸರಳತೆ, ಸತ್ಯ ಹಾಗು ನ್ಯಾಯದ ಮೂಲಕ ಇನ್ನಷ್ಟು ಜನರಿಗೆ ತಲುಪುವಂತೆ ಕರೆ ನೀಡಿದರು ಎಂದು ಆರ್ಚ್ ಬಿಷಪರ ಪ್ರಕಟನೆ ತಿಳಿಸಿದೆ. 

"ರ್ನಾಟಕದ ಆರ್ಚ್ ಡಯೋಸಿಸ್ ಹಾಗು ರಾಜ್ಯವನ್ನು ಪ್ರತಿನಿಧಿಸಿ ಪೋಪ್ ಅವರನ್ನು ಭೇಟಿಯಾಗಿರುವುದು ನಮಗೆ ಬಹಳ ಸಂತಸ ತಂದಿದೆ. ಅವರ ಸರಳತೆ ನಮ್ಮ ಮನಸೂರೆಗೊಂಡಿದೆ. ಬಡವರ ಕುರಿತ ಅವರ ಅತೀವ ಕಾಳಜಿಯಿಂದ ಪ್ರೇರಿತರಾಗಿ ನಾವು ನಮ್ಮ ಸೇವಾ ಚಟುವಟಿಕೆಗಳನ್ನು ಇನ್ನಷ್ಟು ಹೆಚ್ಚಿಸಿರುವುದಾಗಿ ಹಾಗೂ ನಮ್ಮ ಆರ್ಚ್ ಡಯೋಸಿಸ್ ನಲ್ಲಿ ನಿರ್ವಸಿತರಿಗೆ ರಾತ್ರಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಿರುವ ಹಾಗೂ ಅದನ್ನು ಇನ್ನಷ್ಟು ಕಡೆ ವಿಸ್ತರಿಸುವ ಮಾಹಿತಿ ನೀಡಿದೆವು. ಅವರ ಗೌರವಾರ್ಥವಾಗಿ ಮುಂದಿನ ವರ್ಷವನ್ನು ಬಡವರ ವರ್ಷವಾಗಿ ಆಚರಿಸುವುದಾಗಿ ಹೇಳಿದಾಗ ಅವರು ಬಹಳ ಸಂತಸದಿಂದ ಒಪ್ಪಿಗೆ ನೀಡಿದರು" ಎಂದು ಆರ್ಚ್ ಬಿಷಪ್ ಪೀಟರ್ ಮಚಾದೋ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ನಿಯೋಗದಲ್ಲಿ ಬೆಂಗಳೂರಿನ ಆರ್ಚ್ ಬಿಷಪ್ ಎಮಿರೆಟಸ್ ಬರ್ನಾರ್ಡ್ ಮೋರಸ್, ಮಂಗಳೂರಿನ ಬಿಷಪ್ ಪೀಟರ್ ಪಾವ್ಲ್ ಸಲ್ದಾನ , ಬಿಷಪ್ ಎಮಿರೆಟಸ್ ಅಲೋಶಿಯಸ್ ಪಾವ್ಲ್ ಡಿಸೋಜ, ಬಳ್ಳಾರಿ ಬಿಷಪ್ ಹೆನ್ರಿ ಡಿಸೋಜ, ಉಡುಪಿ ಬಿಷಪ್ ಜೆರಾಲ್ಡ್ ಐಸಾಕ್ ಲೋಬೊ ಮತ್ತಿತರ ಬಿಷಪರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News