ಭೂರಹಿತ ಬಡವರಿಗೆ ಭೂಮಿ ಹಕ್ಕಿಗಾಗಿ ಬಿಎಸ್‌ಪಿ ಒತ್ತಾಯ

Update: 2019-09-19 16:21 GMT

ಬೆಂಗಳೂರು, ಸೆ.19: ಭೂರಹಿತ ಬಡವರಿಗೆ ಭೂಮಿಯನ್ನು ಒದಗಿಸುವ ನಿಟ್ಟಿನಲ್ಲಿ ಸರಕಾರ ರೂಪಿಸಿದ ಅವಕಾಶ ವಂಚಿತರಿಗೆ ಭೂಮಿ ಹಕ್ಕನ್ನು ನೀಡುವ ಯೋಜನೆಯನ್ನು ಸರಕಾರ ಮುಂದುವರೆಸುವಂತೆ ಬಹುಜನ ಸಮಾಜ ಪಾರ್ಟಿ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಪಿ.ಶ್ರೀನಿವಾಸ್ ಮಾತನಾಡಿ, ಭೂ ರಹಿತ ಬಡವರಿಗೆ ಸಂವಿಧಾನಾತ್ಮಕವಾಗಿ ಭೂಮಿಯನ್ನು ಹೊಂದಲು ಹಿಂದಿನ ಸರಕಾರ 94ಸಿಸಿ ಮತ್ತು ಫಾರಂ ನಂ.57 ಅರ್ಜಿಗಳನ್ನು ಹಾಕಿಕೊಂಡು ಸರಕಾರಿ ಜಮೀನು ಗಳಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿರುವವರಿಗೆ ವಾಸಸ್ಥಳ ಹಾಗೂ ಜಮೀನನ್ನು ಸಕ್ರಮಗೊಳಿಸಿ ಸೂಕ್ತ ಕಂದಾಯ ದಾಖಲೆಗಳನ್ನು ಒದಗಿಸುವ ಮಹತ್ತರ ಕಾರ್ಯಕ್ರಮವನ್ನು ಸರಕಾರ ಹಮ್ಮಿಕೊಂಡಿತ್ತು. ಆದರೆ 2019ರ ಲೋಕಸಭಾ ಚುನಾವಣೆಯ ಅಧಿಸೂಚನೆಯಿಂದ ಸದರಿ ಕಾರ್ಯಕ್ರಮ ಸ್ಥಗಿತಗೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇನ್ನು, 94ಸಿಸಿ ಮತ್ತು ಫಾರಂ ನಂ.57 ಅರ್ಜಿಗಳನ್ನು ಚುನಾವಣಾ ಅಧಿಸೂಚನೆಯಿಂದ ಕಂದಾಯ ಇಲಾಖೆ ಅಧಿಕಾರಿಗಳು ಸ್ವೀಕರಿಸದೆ ಲಕ್ಷಾಂತರ ಜನ ಅವಕಾಶ ವಂಚಿತರಾಗಿದ್ದಾರೆ. ಹೀಗಾಗಿ, ಇಂದಿನ ಸರಕಾರದ ಈ ಯೋಜನೆಯನ್ನು ಮುಂದುವರೆಸಬೇಕು. ಹೆಚ್ಚಿನ ಜನರಿಗೆ 94ಸಿಸಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಬೇಕು. ಕಂದಾಯ ಸಚಿವರಾದ ಆರ್.ಅಶೋಕ್ 10 ಸಾವಿರ ಕ್ರಯಪತ್ರಗಳನ್ನು 94ಸಿಸಿ ಅಡಿಯಲ್ಲಿ ಅತಿ ಶೀಘ್ರ ಮಾಡಿಕೊಡಲು ನಿರ್ಧರಿಸಿದ್ದಾರೆ. ಅದನ್ನು ಕೂಡಲೇ ಜಾರಿಗೆ ತಂದು ರೈತರಿಗೆ ಕಂದಾಯ ದಾಖಲೆಗಳನ್ನು ಒದಗಿಸುವಂತೆ ಅನುವು ಮಾಡಿಕೊಡಬೇಕೆಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News