ಸಂಸದ ತೇಜಸ್ವಿ ಸೂರ್ಯ ನೂತನ ಕಚೇರಿಗಾಗಿ ‘ಇ- ಗ್ರಂಥಾಲಯ’ ಎತ್ತಂಗಡಿ ?

Update: 2019-09-19 16:46 GMT

ಬೆಂಗಳೂರು, ಸೆ.19: ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರಿಗಾಗಿ ನೂತನ ಕಚೇರಿಯೊಂದು ನಿರ್ಮಿಸಲು, ‘ಇ- ಗ್ರಂಥಾಲಯ’ವನ್ನೇ ಎತ್ತಂಗಡಿ ಮಾಡಲಾಗಿದೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.

ಇಲ್ಲಿನ ಪುಟ್ಟಾಭಿರಾಮ ನಗರದ ಪು.ತಿ.ನ. ಉದ್ಯಾನ ಸಮೀಪದ ಜಯನಗರ 5ನೇ ಬ್ಲಾಕ್‌ನ 11ನೇ ಮುಖ್ಯರಸ್ತೆಯಲ್ಲಿರುವ ಇ- ಗ್ರಂಥಾಲಯ ಜಾಗದಲ್ಲಿ ಸಂಸದ ತೇಜಸ್ವಿ ಸೂರ್ಯ ತಮ್ಮ ನೂತನ ಕಚೇರಿಯನ್ನು ಆರಂಭ ಮಾಡಲಿದ್ದಾರೆ. ಈ ಸಂಬಂಧ ಬಿಬಿಎಂಪಿ ಸಂಸದರ ಕಚೇರಿಗೆ ಸ್ಥಳವನ್ನು ತೆರವುಗೊಳಿಸಲು ಆದೇಶ ಹೊರಡಿಸಿದೆ ಎಂದು ಮೂಲಗಳು ತಿಳಿಸಿವೆ.

ಅಲ್ಲದೆ, ಕಚೇರಿ ನಿರ್ಮಾಣಗೊಳ್ಳುತ್ತಿರುವ ಸ್ಥಳ ಇ-ಗ್ರಂಥಾಲಯಕ್ಕೆ ಸೇರಿದೆ, ಇದೇ ಜಯನಗರದ ಶಾಸಕರಾಗಿದ್ದ ದಿವಂಗತ ವಿಜಯಕುಮಾರ್, ಬಿಜೆಪಿ ಹಿರಿಯ ನಾಯಕ ದಿವಂಗತ ಅನಂತ್ ಕುಮಾರ್ ಇ-ಗ್ರಂಥಾಲಯ ಉದ್ಘಾಟಿಸಿದ್ದರು. ವಿದ್ಯಾರ್ಥಿಗಳ ಕಲಿಕೆಗಾಗಿ ಜಯನಗರ ವ್ಯಾಪ್ತಿಯಲ್ಲಿರುವ ಗ್ರಂಥಾಲಯಗಳು ಬೆರಳೆಣಿಕೆಯಷ್ಟು ಮಾತ್ರ. ಈ ಮಧ್ಯೆ, ಸಂಸದರ ಕಚೇರಿಗಾಗಿ ಗ್ರಂಥಾಲಯವನ್ನು ಬೇರೆಡೆಗೆ ಸ್ಥಳಾಂತರಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಸ್ಥಳೀಯರು ಪ್ರಶ್ನೆ ಮಾಡಿದ್ದಾರೆ.

ಜಯನಗರದ ಬಹುತೇಕ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಇದೆ. ಈ ಮಧ್ಯೆ ಸಂಸದರ ಕಚೇರಿಯೂ ಆರಂಭವಾದರೆ ಸಾರ್ವಜನಿಕರ ಓಡಾಟ ಅಧಿಕವಾಗಲಿದ್ದು, ಇಲ್ಲಿನ ನಿವಾಸಿಗಳಿಗೆ ತೊಂದರೆಯೂ ಹೆಚ್ಚಾಗಲಿದೆ ಎಂದು ಸ್ಥಳೀಯರು ಆರೋಪಿಸಿದರು.

ಅನಂತ್‌ ಕುಮಾರ್ ಕಚೇರಿ ಬೇಡ?: ಬಿಜೆಪಿ ಹಿರಿಯ ನಾಯಕ ದಿವಂಗತ ಅನಂತ್‌ಕುಮಾರ್ ಅವರು ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ನಗರದ ಸೌತ್ ಎಂಡ್ ವೃತ್ತದಲ್ಲಿರುವ ಕಚೇರಿಯನ್ನು ಬಳಕೆ ಮಾಡಲು ತೇಜಸ್ವಿ ಸೂರ್ಯ ನಿರಾಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News