ಅ.10ರಿಂದ ರಾಷ್ಟ್ರೀಯ ಪಾರಂಪರಿಕ ವೈದ್ಯ ಸಮ್ಮೇಳನ

Update: 2019-09-19 16:49 GMT

ಬೆಂಗಳೂರು, ಸೆ.19: ರಾಷ್ಟ್ರೀಯ ಪಾರಂಪರಿಕ ವೈದ್ಯ ಸಮ್ಮೇಳನ ಅ.10 ರಿಂದ 12ರವರೆಗೆ ಮೂರು ದಿನಗಳ ಕಾಲ ರಾಮನಗರ ಜಿಲ್ಲೆಯ ಆದಿಚುಂಚನಗಿರಿ ಮಠದಲ್ಲಿ ನಡೆಯಲಿದೆ ಎಂದು ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ತಿಳಿಸಿದೆ.

ಗುರುವಾರ ಇಲ್ಲಿನ ಗಾಂಧಿನಗರದ ಆಯುಷ್ ಇಲಾಖೆ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪರಿಷತ್ ಅಧ್ಯಕ್ಷ ಡಾ.ಎನ್.ಗುರುಸಿದ್ದಪ್ಪ, ಸಮ್ಮೇಳನದಲ್ಲಿ 20 ರಾಜ್ಯಗಳ ಪಾರಂಪರಿಕ ವೈದ್ಯರು ಭಾಗವಹಿಸಲಿದ್ದು, ರಾಜ್ಯದ ಎರಡು ಸಾವಿರ ವೈದ್ಯರು ಸೇರಲಿದ್ದಾರೆ ಎಂದರು.

ಸಮ್ಮೇಳನವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಉದ್ಘಾಟನೆ ಮಾಡಲಿದ್ದು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಆರೋಗ್ಯ ಸಚಿವ ಶ್ರೀರಾಮುಲು ಸೇರಿದಂತೆ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಪ್ರಶಸ್ತಿ: ಪಾರಂಪರಿಕ ವೈದ್ಯ ಕ್ಷೆತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ನಾಡಿನ ಮಹನೀಯರನ್ನು ಗುರುತಿಸಲು ಪಾರಂಪರಿಕ ವೈದ್ಯ ರತ್ನ ಪ್ರಶಸ್ತಿ, ಧನ್ವಂತರಿಯ ಪಂಚಲೋಹದ ಸ್ಮರಣಿಕೆ, ಪ್ರಶಸ್ತಿ ಪತ್ರ ಹಾಗೂ 10 ಸಾವಿರ ರೂ. ಗೌರವಧನ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ರಾಜಾಶ್ರಯದಲ್ಲಿ ಬೆಳೆದ ವೈದ್ಯ ಪದ್ಧತಿ ಇಂದು ಮಠಗಳ ಆಶ್ರಯದಲ್ಲಿ ವಿಕಾಸಗೊಳ್ಳುತ್ತಿದೆ. ಈ ಹಿಂದೆ 8 ರಾಜ್ಯ ಸಮ್ಮೇಳನಗಳನ್ನು ರಾಜ್ಯದ ವಿವಿಧ ಮಠಗಳ ಆಶ್ರಯದಲ್ಲಿ ನಡೆಸಲಾಗಿದೆ. ಸರಕಾರ ಈ ಪ್ರಾಚೀನ ಆರೋಗ್ಯ ಪರಂಪರೆಗೆ ಪ್ರೋತ್ಸಾಹಿಸುವ ಅಗತ್ಯವಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪಾರಂಪರಿಕ ವೈದ್ಯ ಪರಿಷತ್ ಕಾರ್ಯದರ್ಶಿ ಡಾ.ಶಾಂತವೀರಪ್ಪ, ಉಪಾಧ್ಯಕ್ಷ ಗಾ.ನಂ.ಶ್ರೀಕಂಠಯ್ಯ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News