"ಜ್ಞಾನವೇ ಧರ್ಮ, ಜನ ಕಲ್ಯಾಣವೇ ತತ್ವಜ್ಞಾನ ಎಂದು ಸರ್.ಎಂ.ವಿಶ್ವೇಶ್ವರಯ್ಯ ನಂಬಿದ್ದರು"

Update: 2019-09-19 16:55 GMT

ಬೆಂಗಳೂರು, ಸೆ. 19: ‘ಸರ್.ಎಂ.ವಿಶ್ವೇಶ್ವರಯ್ಯ ಅತ್ಯಂತ ಪ್ರಾಮಾಣಿಕ, ಸರಳ, ದಕ್ಷ ಮತ್ತು ಶಿಸ್ತಿನ ವ್ಯಕ್ತಿಯಷ್ಟೇ ಅಲ್ಲ, ಅವರು ದೇಶಪ್ರೇಮಿ ಹಾಗೂ ಸಮಾನತೆಯ ಪರವಾಗಿದ್ದರು. ಜ್ಞಾನವೇ ತಮ್ಮ ಧರ್ಮ, ಜನರ ಕಲ್ಯಾಣವೇ ತಮ್ಮ ತತ್ವಜ್ಞಾನ, ಸತ್ಯವೇ ದೇವರು, ಕಾಯಕವೇ ಕೈಲಾಸ ಎಂದು ಪರಿಗಣಿಸಿದ್ದರು’ ಎಂದು ಸರ್‌ಎಂವಿ ಮೊಮ್ಮಗ ಶೇಷಾದ್ರಿ ಮೋಕ್ಷಗುಂಡಂ ತಿಳಿಸಿದ್ದಾರೆ.

ಗುರುವಾರ ಅಲುಮ್ನಿ ಅಸೋಸಿಯೇಷನ್ ಸಭಾಂಗಣದಲ್ಲಿ ‘ಇಂಜಿನಿಯರಿಂಗ್ ಕಾಲೇಜ್ ಫ್ಯಾಕಲ್ಟಿ ಅಸೋಸಿಯೇಷನ್’ನಿಂದ ಏರ್ಪಡಿಸಿದ್ದ ಸರ್‌ಎಂವಿ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್‌ಎಂವಿ ದೇವಸ್ಥಾನಗಳಲ್ಲಿ ಸಹಪಂಕ್ತಿ ಭೋಜನ, ದರ್ಬಾರುಗಳಲ್ಲಿ ಸಮ ಆಸನಗಳು, ಮಹಿಳೆಯರ ಶಿಕ್ಷಣ ಮತ್ತು ಆಧುನಿಕ ವೈಜ್ಞಾನಿಕ ಶಿಕ್ಷಣಕ್ಕಾಗಿ ಧ್ವನಿಯೆತ್ತಿದ್ದರು ಎಂದು ಸ್ಮರಿಸಿದರು.

ವಿಜ್ಞಾನಿ ಪ್ರೊ. ರೋದ್ದಂ ನರಸಿಂಹ ಮಾತನಾಡಿ, ಹಳೇ ಮೈಸೂರು ಕಂಡ ಅತ್ಯಂತ ಮಹಾನ್ ವ್ಯಕ್ತಿ. ಭಾರತದ ಕೈಗಾರೀಕರಣಕ್ಕೆ ಕಾರಣ ಸರ್.ಎಂ.ವಿ. ಗಾಂಧಿಯವರನ್ನು ಸಾಕಷ್ಟು ಗೌರವಿಸುತ್ತಿದ್ದರೂ, ಅವರ ಗುಡಿಕೈಗಾರಿಕೆ ಪರಿಕಲ್ಪನೆಯನ್ನು ಪ್ರತಿರೋಧಿಸಿ ತಂತ್ರಜ್ಞಾನ ಆಧಾರಿತ ಬೃಹತ್ ಕೈಗಾರಿಕೆ ಮತ್ತು ಕೃಷಿಯ ಪರವಾಗಿ ನಿಂತರು. ಒಂದೆಡೆ ಶೈಕ್ಷಣಿಕ ಸಂಸ್ಥೆಗಳನ್ನು ಕಟ್ಟಿ ಇಂಜಿನಿಯರ್‌ಗಳನ್ನು ಸೃಷ್ಟಿಸಿದರು, ಮತ್ತೊಂದೆಡೆ ಆಧುನಿಕ ಕೈಗಾರಿಕೆಗಳನ್ನು ತೆರೆದು ಉದ್ಯೋಗಗಳನ್ನು ಸೃಷ್ಟಿಸಿದರು ಎಂದು ನೆನಪು ಮಾಡಿಕೊಂಡರು.

ಪ್ರೊ.ಬಸವರಾಜ್, ರಾಜೇಶ್ ಭಟ್, ಪ್ರೊ.ಬಿ.ನಾರಾಯಣಪ್ಪ, ರಾಜಶೇಖರ್, ಡಾ.ಎಚ್.ಎನ್.ರಮೇಶ್, ವಾಸುದೇವ್ ಮೂರ್ತಿ, ಪ್ರೊ.ಸನಾಉಲ್ಲಾ, ಐಶ್ವರ್ಯ ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News