ಈಡಿ-ಐಟಿ ಇಲಾಖೆ ಬಗ್ಗೆ ನಂಬಿಕೆ ಹೆಚ್ಚಾಗಿದೆ: ಎನ್.ರವಿಕುಮಾರ್

Update: 2019-09-19 17:06 GMT

ಬೆಂಗಳೂರು, ಸೆ.19: ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆ ಬಗ್ಗೆ ದೇಶದ ಜನರಲ್ಲಿ ಈಗ ನಂಬಿಕೆ ಹೆಚ್ಚಾಗಿದೆ. ಅಷ್ಟೇ, ಅಲ್ಲ ನ್ಯಾಯಾಂಗ ವ್ಯವಸ್ಥೆಯ ಬಗ್ಗೆಯೂ ಜನರ ವಿಶ್ವಾಸ ಮತ್ತಷ್ಟು ವೃದ್ಧಿಸಿದೆ ಎಂದು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ತಿಳಿಸಿದ್ದಾರೆ.

ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ಬಿಜೆಪಿ ಹೇಳಿದಂತೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ತಿಹಾರ್ ಜೈಲು ಪಾಲಾಗಿದ್ದಾರೆ. ಶಿವಕುಮಾರ್ ಕಾನೂನು ಕುಣಿಕೆಯಿಂದ ಬಚಾವಾಗಿ ಬಿಡುಗಡೆಯಾಗುತ್ತಾರೆ ಎಂದು ರಾಜ್ಯದ ಜನರಾಗಲಿ, ಬಿಜೆಪಿಯಾಗಲಿ ನಿರೀಕ್ಷೆ ಮಾಡಿರಲೂ ಇಲ್ಲ ಎಂದು ಅವರು ಹೇಳಿದ್ದಾರೆ.

ಗುರುತರವಾದ ಅಪರಾಧ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗದೇ ಇರುವುದಿಲ್ಲ ಎನ್ನುವುದು ಡಿ.ಕೆ.ಶಿವಕುಮಾರ್ ಪ್ರಕರಣದಲ್ಲಿ ಸಾಬೀತಾಗಿದೆ. ಬಿಜೆಪಿ ನಾಯಕ ಯಡಿಯೂರಪ್ಪ ವಿರುದ್ಧ ನ್ಯಾಯಾಲಯದಲ್ಲಿ ಇತ್ಯರ್ಥವಾದ ಪ್ರಕರಣಗಳನ್ನು ಪ್ರಸ್ತಾಪಿಸಿ ಟೀಕಿಸುತ್ತಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ತಿಹಾರ್ ಜೈಲುಪಾಲಾದ ನಂತರ ಏಕೆ ಮಾತನಾಡುತ್ತಿಲ್ಲ? ಎಂದು ಅವರು ಪ್ರಶ್ನಿಸಿದ್ದಾರೆ.

ಆರ್ಥಿಕ ಅಪರಾಧದಂತಹ ಗಂಭೀರ ಪ್ರಕರಣದಲ್ಲಿ ಪಿ.ಚಿದಂಬರಂ ಮತ್ತು ಡಿ.ಕೆ.ಶಿವಕುಮಾರ್ ಪರ ನಿಂತಿರುವ ಕಾಂಗ್ರೆಸ್ ಮುಖಂಡರಿಗೆ ನಾಚಿಕೆಯಾಗಬೇಕು. ಪ್ರಧಾನಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರನ್ನು ನಿಂದಿಸಿ ಹೋರಾಟ ಸಂಘಟಿಸಿದ್ದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಡಿ.ಕೆ.ಶಿವಕುಮಾರ್ ತಿಹಾರ್ ಜೈಲಿಗೆ ಹೋದ ನಂತರ ಏಕೆ ಮೌನವಾಗಿದ್ದಾರೆ ಎಂದು ರವಿಕುಮಾರ್ ಕೇಳಿದ್ದಾರೆ.

ಶಿವಕುಮಾರ್ ನಾನು ನಿರಪರಾಧಿ ಎಂದು ಹೇಳಿಕೆ ನೀಡುತ್ತಲೇ ಬಂದಿದ್ದಾರೆ. ಆದರೆ, ಕಾನೂನು ವ್ಯವಸ್ಥೆಯಲ್ಲಿ ಈಗ ಅವರು ಎದುರಿಸುತ್ತಿರುವ ವಿಚಾರಣೆ ಅವರನ್ನು ನಿರಪರಾಧಿ ಎಂದು ಹೇಳುವಂತಹ ಸ್ಥಿತಿಯಲ್ಲಿಲ್ಲ ಎನ್ನುವುದು ವಾಸ್ತವ ಎಂದು ರವಿಕುಮಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News