ಅತ್ಯಾಚಾರ ಪ್ರಕರಣ: ಬಿಜೆಪಿ ನಾಯಕ ಚಿನ್ಮಯಾನಂದ ಬಂಧನ

Update: 2019-09-20 07:44 GMT

ಲಕ್ನೋ, ಸೆ.20: ಉತ್ತರಪ್ರದೇಶದ 23 ವಯಸ್ಸಿನ ಕಾನೂನು ವಿದ್ಯಾರ್ಥಿನಿಯೊಬ್ಬಳನ್ನು ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರದ ಮಾಜಿ ಸಚಿವ, ಬಿಜೆಪಿಯ ಪ್ರಭಾವಿ ನಾಯಕ,  ಚಿನ್ಮಯಾನಂದನನ್ನು ಸುಪ್ರೀಂಕೋಟ್‌ನ ಆದೇಶದ ಮೇರೆಗೆ ರಚಿಸಲ್ಪಟ್ಟಿರುವ ವಿಶೇಷ ತನಿಖಾ ತಂಡದ(ಸಿಟ್)ಸದಸ್ಯರು ಶುಕ್ರವಾರ ಬೆಳಗ್ಗೆ ಉತ್ತರಪ್ರದೇಶದ ಶಹಜಹಾನ್ಪುರ ಜಿಲ್ಲೆಯಲ್ಲಿರುವ ಚಿನ್ಮಯಾನಂದನ ಆಶ್ರಮದಲ್ಲಿ ಬಂಧಿಸಿದೆ.
 73 ವಯಸ್ಸಿನ ಚಿನ್ಮಯಾನಂದನನ್ನು ವೈದ್ಯಕೀಯ ಪರೀಕ್ಷೆಗಾಗಿ ಶಹಜಹಾನ್ಪುರ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು, ಪರೀಕ್ಷೆ ಮುಗಿದ ತಕ್ಷಣ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಮ್ಯಾಜಿಸ್ಟ್ರೇಟ್ ನ್ಯಾಯಾಲಯ, ಚಿನ್ಮಯಾನಂದನನ್ನು 14 ದಿನಗಳ ಕಾಲ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿದೆ.

ಈ ಹಿಂದೆ ಅಟಲ್‌ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಕೇಂದ್ರ ಸಚಿವನಾಗಿದ್ದ ಚಿನ್ಮಯಾನಂದ ಸಹಜಹಾನ್ಪುರದಲ್ಲಿ ಹಲವು ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿದ್ದು ಇದರಲ್ಲಿ ಸ್ವಾಮಿ ಸುಖದೇವಾನಂದ ಸ್ನಾತಕೋತ್ತರ ಕಾಲೇಜು ಕೂಡ ಒಂದಾಗಿದೆ. ಇದೇ ಕಾಲೇಜಿನ ವಿದ್ಯಾರ್ಥಿನಿ ಚಿನ್ಮಯಾನಂದನ ವಿರುದ್ಧ ಲೈಂಗಿಕ ದೌರ್ಜನ್ಯ, ಪದೇ ಪದೇ ಬ್ಲಾಕ್‌ಮೇಲ್ ಮಾಡುತ್ತಿರುವ ಆರೋಪವನ್ನು ಹೊರಿಸಿದ್ದರು.

ವಿದ್ಯಾರ್ಥಿನಿ ಸೆ.5ರಂದು ದಿಲ್ಲಿ ಪೊಲೀಸರಿಗೆ ಅಧಿಕೃತ ದೂರು ಸಲ್ಲಿಸಿದ್ದು, ಆ ದೂರನ್ನು ಸೆ.7ಕ್ಕೆ ಸಿಟ್‌ಗೆ ವರ್ಗಾಯಿಸಲಾಗಿತ್ತು. ಚಿನ್ಮಯಾನಂದನನ್ನು ಬಂಧಿಸದೇ ಇದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಂತ್ರಸ್ತ ಕಾಲೇಜು ವಿದ್ಯಾರ್ಥಿನಿ ಬುಧವಾರ ಬೆದರಿಕೆ ಹಾಕಿದ್ದರು. ‘‘ನನ್ನ ಹೇಳಿಕೆಯನ್ನು ದಾಖಲಿಸಿ 15 ದಿನಗಳು ಕಳೆದಿವೆ. ಆದರೆ, ವಿಶೇಷ ತನಿಖಾ ತಂಡ(ಸಿಟ್)ಆರೋಪಿಯನ್ನು ಈ ತನಕ ಬಂಧಿಸಿಲ್ಲ’’ ಎಂದು ವಿದ್ಯಾರ್ಥಿನಿ ಬೇಸರ ವ್ಯಕ್ತಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News