ಅನಿವಾಸಿ ಭಾರತೀಯ ಉದ್ಯಮಿ ಬಿ.ಆರ್. ಶೆಟ್ಟಿಯವರಿಂದ ಕಾಶ್ಮೀರದಲ್ಲಿ ಫಿಲಂ ಸಿಟಿ

Update: 2019-09-20 11:22 GMT

ಜೆಡ್ಡಾ, ಸೆ.20: ಪ್ರಮುಖ ಅನಿವಾಸಿ ಭಾರತೀಯ ಉದ್ಯಮಿ ಬಿ.ಆರ್. ಶೆಟ್ಟಿ ಜಮ್ಮು ಮತ್ತು ಕಾಶ್ಮೀರದಲ್ಲಿ ಫಿಲಂ ಸಿಟಿ ತೆರೆಯುವ ಯೋಜನೆಯನ್ನು ಘೋಷಿಸಿದ್ದಾರೆ.

12 ಚದರ ಕಿಲೋಮೀಟರ್ ವಿಸ್ತೀರ್ಣದಲ್ಲಿ ಈ ಫಿಲಂ ಸಿಟಿ ನಿರ್ಮಾಣವಾಗಲಿದೆ. ಜಮ್ಮು-ಕಾಶ್ಮೀರ ಮತ್ತು ಲಡಾಖ್‍ ನಿಂದ ಈಗಾಗಲೇ ಭೂಮಿ ನೀಡುವ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗಿದೆ.

"ಜಮ್ಮು ಮತ್ತು ಕಾಶ್ಮೀರ ಅತ್ಯಂತ ರಮಣೀಯ ತಾಣಗಳಾಗಿದ್ದು, ಅಲ್ಲಿ ಚಿತ್ರನಗರಿ ಸ್ಥಾಪಿಸಲು ಉದ್ದೇಶಿಸಿದ್ದೇನೆ. ಜನ ಇಲ್ಲಿ ಬಂದು ಚಲನಚಿತ್ರಗಳ ಚಿತ್ರೀಕರಣ ಮಾಡಬಹುದು ಹಾಗೂ ಪ್ರವಾಸೋದ್ಯಮ ಉತ್ತೇಜನಕ್ಕೂ ಇದು ಸಹಕಾರಿ" ಎಂದು ಎನ್‍ಎಂಸಿ ಹೆಲ್ತ್‍ ಕೇರ್ ಸಂಸ್ಥಾಪಕರಾಗಿರುವ ಬಿ.ಆರ್.ಶೆಟ್ಟಿ ಹೇಳಿದ್ದಾಗಿ ಅರೇಬಿಯನ್ ಬ್ಯುಸಿನೆಸ್ ವರದಿ ಮಾಡಿದೆ.

ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಯುಎಇಗೆ ಭೇಟಿ ನೀಡಿದಾಗ ಬಿ.ಆರ್. ಶೆಟ್ಟಿ ಸೇರಿದಂತೆ ಹಲವು ಮಂದಿ ಭಾರತೀಯ ಮೂಲದ ಉದ್ಯಮಿಗಳು ಭಾರತದಲ್ಲಿ ಹೂಡಿಕೆ ಮಾಡುವ ಭರವಸೆ ನೀಡಿದ್ದರು. ಶೆಟ್ಟಿ ಜಮ್ಮು ಮತ್ತು ಕಾಶ್ಮೀರಕ್ಕೆ 100 ಕೋಟಿ ಡಾಲರ್ ಮತ್ತು ಹೊಸ ಭಾರತ ಅಭಿವೃದ್ಧಿ ನಿಧಿಗೆ 500 ದಶಲಕ್ಷ ಡಾಲರ್ ನೀಡುವ ವಾಗ್ದಾನ ಮಾಡಿದ್ದರು ಎಂದು ವರದಿಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News