ನಾವು ಕಾಂಗ್ರೆಸ್ ನಲ್ಲೇ ಇದ್ದೇವೆ, ಉಚ್ಛಾಟನೆ ಮಾಡಲು ಸಾಧ್ಯವಿಲ್ಲ: ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್

Update: 2019-09-20 16:26 GMT

ಬೆಂಗಳೂರು, ಸೆ. 20: ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಇಬ್ಬರು ಒಂದೇ ನಾಣ್ಯದ ಎರಡು ಮುಖ. ಆದರೆ, ಕೆಲವರು ಸುಮ್ಮನೆ ಹಾವು-ಮುಂಗುಸಿಯಂತೆ ಬಿಂಬಿಸುತ್ತಿದ್ದಾರೆ ಎಂದು ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಡಾ.ಜಿ.ಪರಮೇಶ್ವರ್ ಅವರನ್ನು ಬಿಟ್ಟು ಕಾಂಗ್ರೆಸ್ ಪಕ್ಷವನ್ನು ಕಟ್ಟಲು ಸಾಧ್ಯವಿಲ್ಲ. ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ತಪ್ಪಿಸಲು ಕೆಲವರು ಪ್ರಯತ್ನಿಸಿದರು, ಅದು ಸಾಧ್ಯವಾಗಲಿಲ್ಲ. ಈ ಬಗ್ಗೆ ಸಂದರ್ಭ ಬಂದಾಗ ಬಹಿರಂಗಪಡಿಸುವೆ ಎಂದರು.

ಚುನಾವಣಾ ಆಯೋಗ ಹೇಳಬೇಕು: ಮಧ್ಯಂತರ ಚುನಾವಣೆ ಕುರಿತು ದೇವೇಗೌಡ ಹಾಗೂ ಸಿದ್ದರಾಮಯ್ಯ ಏನೇ ಹೇಳಿದರೂ, ಅಂತಿಮವಾಗಿ ಚುನಾವಣಾ ಆಯೋಗವೇ ಈ ಬಗ್ಗೆ ಹೇಳಬೇಕು. ಕಾಂಗ್ರೆಸ್ ನಾಯಕರಿಗೆ ಕೆಲಸ ಇಲ್ಲ. ಹೀಗಾಗಿ ಏನೇನೋ ಮಾತನಾಡುತ್ತಿದ್ದಾರೆಂದು ಅವರು ಟೀಕಿಸಿದರು.

ಕ್ಷೇತ್ರದ ಅಭಿವೃದ್ಧಿಗಾಗಿ ಭಿಕ್ಷೆ: ನಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಭಿಕ್ಷೆ ಕೇಳುತ್ತೇವೆ. ಹುಲಿ ಎಲ್ಲೇ ಇದ್ದರು ಹುಲಿಯೇ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ನಮಗೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ. ನಾವೂ ಈಗಲೂ ಕಾಂಗ್ರೆಸ್‌ನಲ್ಲೇ ಇದ್ದೇವೆ ಎಂದರು.

ನಾವು ಸಚಿವರಾಗುತ್ತೇವೆ ಎಂದು ಎಲ್ಲೂ ಹೇಳಿಲ್ಲ. ಜತೆಗೆ ಬಿಜೆಪಿ ಸೇರ್ಪಡೆ ಬಗ್ಗೆಯೂ ಹೇಳಿಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ಶೀಘ್ರವೇ ನಮ್ಮ ಅರ್ಜಿ ವಿಚಾರಣೆಗೆ ಬರಲಿದ್ದು, ನಮ್ಮ ಪರ ತೀರ್ಪು ಬರುವ ವಿಶ್ವಾಸವಿದೆ ಎಂದು ಸೋಮಶೇಖರ್ ಭರವಸೆ ವ್ಯಕ್ತವಪಡಿಸಿದರು. 

ಕಾಂಗ್ರೆಸ್ ನಾಯಕರಿಗೆ ಅನರ್ಹ ಶಾಸಕರ ಕ್ಷೇತ್ರಗಳ ಚುನಾವಣೆಯದ್ದೇ ದೊಡ್ಡ ಚಿಂತೆಯಾಗಿದೆ. ಹೀಗಾಗಿ ಪ್ರತಿನಿತ್ಯ ಮಧ್ಯಂತರ ಚುನಾವಣೆ ಎಂಬ ಹೇಳಿಕೆ ನೀಡುತ್ತಿದ್ದಾರೆ. ನಾವು ಕಾಂಗ್ರೆಸ್ ಪಕ್ಷದಲ್ಲೆ ಇದ್ದೇವೆ. ನಮ್ಮನ್ನು ಉಚ್ಛಾಟನೆ ಮಾಡಲು ಸಾಧ್ಯವಿಲ್ಲ’

-ಎಸ್.ಟಿ.ಸೋಮಶೇಖರ್, ಅನರ್ಹ ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News