ಮನೆಯಲ್ಲಿ ಜಿಲೆಟಿನ್ ಕಡ್ಡಿ ಸ್ಫೋಟ: ಕಾರ್ಮಿಕನಿಗೆ ಗಾಯ

Update: 2019-09-20 16:35 GMT

ಬೆಂಗಳೂರು, ಸೆ.20: ಮನೆಯೊಂದರಲ್ಲಿ ಜಿಲೆಟಿನ್ ಕಡ್ಡಿಗಳು ಸ್ಫೋಟಗೊಂಡ ಪರಿಣಾಮ ಕಾರ್ಮಿಕ ಗಾಯಗೊಂಡಿರುವ ಘಟನೆ ಯಲಹಂಕದ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕಾರ್ಮಿಕ ಪವನ್‌ಕುಮಾರ್ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸ್ಫೋಟದ ಪರಿಣಾಮ ಅಕ್ಕಪಕ್ಕದ ಮನೆಯ ಗೋಡೆಗಳು ಬಿರುಕು ಬಿಟ್ಟಿದ್ದು, ಕಿಟಕಿ ಗಾಜುಗಳು ಹಾಗೂ ಬಾಗಿಲುಗಳು ಜಖಂಗೊಂಡಿದೆ. ಚಿಕ್ಕಜಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಘಟನೆ ವಿವರ: ಯಲಹಂಕದ ಚಿಕ್ಕಜಾಲ ಬಳಿಯ ಕೋಡಗಲಹಟ್ಟಿ ನಿವಾಸಿಯಾದ ರಮೇಶ್, ತನ್ನ ಒಂದು ಮನೆಯನ್ನು ಕಲ್ಲುಕ್ವಾರಿ ಕೆಲಸ ಮಾಡುವ ಕಾರ್ಮಿಕರಿಗೆ ಬಾಡಿಗೆ ನೀಡಿದ್ದರು. ಈ ಕಾರ್ಮಿಕರು ತಮ್ಮ ಕೆಲಸದ ಸಲುವಾಗಿ ಜಿಲೆಟಿನ್ ಕಡ್ಡಿಗಳನ್ನು ಮನೆಯಲ್ಲಿ ಸಂಗ್ರಹಿಸಿಟ್ಟಿದ್ದರು.

ಶುಕ್ರವಾರ ಬೆಳಗ್ಗೆ ಪವನ್ ಎಂಬ ಕಾರ್ಮಿಕ ಕಾಫಿ ಮಾಡಲು ಹೋದಾಗ ಭಾರೀ ಸ್ಫೋಟ ಸಂಭವಿಸಿ, ಬೆಂಕಿ ಆವರಿಸಿಕೊಂಡಿದೆ. ತಕ್ಷಣ ಆತ ಮನೆಯಿಂದ ಹೊರಗಡೆ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೆ, ಸ್ಫೋಟದ ಪರಿಣಾಮ ಮನೆಯೊಳಗಿನ ಬೆಂಕಿ ಎಲ್ಲ ಕಡೆ ಆವರಿಸುತ್ತಿದ್ದಂತೆ ಸ್ಥಳೀಯರು ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿ ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ನಂತರ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಮನೆಯೊಳಗೆ ಹೋಗಿ ನೋಡಿದಾಗ ಸಿಲಿಂಡರ್‌ಗೆ ಯಾವುದೇ ಹಾನಿಯಾಗದಿರುವುದು ಕಂಡುಬಂದಿದೆ. ಮನೆಯನ್ನು ಸಂಪೂರ್ಣವಾಗಿ ತಪಾಸಣೆಗೆ ಒಳಪಡಿಸಿದಾಗ ಜಿಲೆಟಿನ್ ಕಡ್ಡಿಗಳು ಶೇಖರಣೆಯಾಗಿರುವುದು ಕಂಡುಬಂದಿದೆ.

ಈ ಕಡ್ಡಿಗಳಿಗೆ ಬೆಂಕಿ ತಗುಲಿದ್ದರಿಂದ ಸ್ಫೋಟಗೊಂಡಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ವಸ್ತುವನ್ನು ಕಲ್ಲುಬಂಡೆ ಒಡೆಯಲು ಬಳಸಲಾಗುವುದರಿಂದ ಅಪಾಯಕಾರಿಯಾಗಿರುತ್ತದೆ. ಇವುಗಳನ್ನು ಮನೆಯಲ್ಲಿ ಸಂಗ್ರಹಿಸಿಟ್ಟಿರುವುದು ಅಪಾಯಕಾರಿ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News