ಬಾರ್ ತೆರಿವಿಗೆ ಆಗ್ರಹಿಸಿ ರೈತ ಮುಖಂಡರು, ವಿದ್ಯಾರ್ಥಿಗಳಿಂದ ಪ್ರತಿಭಟನೆ

Update: 2019-09-20 16:54 GMT

ಬೆಂಗಳೂರು, ಸೆ.20: ಯಲಹಂಕದ ರಾಜಾನುಕುಂಟೆ ಕಾಕೋಳು ಮುಖ್ಯರಸ್ತೆಯ ಪ್ರೆಸಿಡೆನ್ಸಿ ವಿಶ್ವವಿದ್ಯಾನಿಲಯ ಬಳಿ ಆರಂಭಿಸಿರುವ ಬಾರ್ ರೆಸ್ಪೋರೆಂಟ್ ತೆರವುಗೊಳಿಸಬೇಕೆಂದು ಒತ್ತಾಯಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು, ರೈತ ಮುಖಂಡರು ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. 

ಈ ವೇಳೆ ರೈತ ಹೋರಾಟಗಾರ ಕಡತನಮಲೆ ಸತೀಶ್ ಮಾತನಾಡಿ, ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ವಿಶ್ವವಿದ್ಯಾನಿಲಯದ ಸಮೀಪದಲ್ಲಿ ಬಾರ್ ತೆರೆದಿರುವುದು ಸಮಾಜದ ಸ್ವಾಸ್ಥ್ಯ ಕೆಡಿಸುವ ಪ್ರಯತ್ನ. ಇದರಿಂದ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ತೊಂದರೆಯಾಗುವುದರ ಜೊತೆಗೆ ಗ್ರಾಮೀಣ ಜನತೆಯನ್ನು ದುರಭ್ಯಾಸಕ್ಕೆ ಈಡಾಗುವಂತೆ ಮಾಡುವ ಪ್ರಯತ್ನವಾಗಿದೆ ಎಂದು ಆರೋಪಿಸಿದ್ದಾರೆ. ಈಗ ಬಾರ್ ಹಾಗೂ ರೆಸ್ಟೋರೆಂಟ್ ತೆರೆಯಲಾಗಿದೆ. ಮುಂದಿನ ದಿನಗಳಲಿ ಗಾಂಜಾ, ಅಪೀಮು ಮುಂತಾದ ಡ್ರಗ್ಸ್ ಮಾಫಿಯಾ ತಲೆಯೆತ್ತುವ ಭೀತಿ ಇದೆ. ಈ ಎಲ್ಲಾ ಕಾರಣಗಳಿಂದಾಗಿ ಇಲ್ಲಿನ ಬಾರ್ ಹಾಗೂ ರೆಸ್ಟೊರೆಂಟ್ ಅನ್ನು ಕೂಡಲೇ ತೆರವುಗೊಳಿಸಿ, ಸ್ಥಳೀಯ ನಾಗರಿಕರು ಮತ್ತು ವಿದ್ಯಾರ್ಥಿಗಳು ದುಶ್ಚಟಕ್ಕೆ ಬಲಿಯಾಗದಂತೆ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ರೀತಿಯ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡ ಇಟಗಲ್‌ಪುರ ಮೋಹನ್, ಚಂದ್ರಹಾಸ್ ಸೇರಿದಂತೆ ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆಯ ಮುಖಂಡರು ಹಾಗೂ ಪ್ರೆಸಿಡೆನ್ಸಿ ವಿಶ್ವವಿದ್ಯಾನಿಲಯದ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News