ಬಜರಂಗ್‌ಗೆ ಸೆಮಿ ಫೈನಲ್‌ನಲ್ಲಿ ಸೋಲು: ವಿಶ್ವ ಕುಸ್ತಿ ಒಕ್ಕೂಟವನ್ನು ಸಂಪರ್ಕಿಸಿದ ಭಾರತ

Update: 2019-09-21 06:36 GMT

ಹೊಸದಿಲ್ಲಿ, ಸೆ.20: ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನ ಸೆಮಿ ಫೈನಲ್‌ನಲ್ಲಿ ಕಝಖ್‌ಸ್ತಾನದ ಡೌಲೆಟ್ ನಿಯಾಝ್‌ಬೆಕೊವ್‌ಗೆ ಬಜರಂಗ್ ಪೂನಿಯಾ ಸೋತ ಬಳಿಕ ಭಾರತದ ಕುಸ್ತಿ ಒಕ್ಕೂಟ ಗುರುವಾರ ವಿಶ್ವ ಕುಸ್ತಿ ಸಂಘಟನೆಗೆ ಪತ್ರ ಬರೆದು ತನಗಾಗಿರುವ ಅನ್ಯಾಯದ ಬಗ್ಗೆ ಗಮನ ಸೆಳೆದಿದೆ.

‘‘ಸೆಮಿ ಫೈನಲ್ ಪಂದ್ಯವನ್ನು ಪುನರ್‌ಪರಿಶೀಲಿಸುವಂತೆ ನಾವು ಕೇಳಿಕೊಂಡಿದ್ದೆವು. ನಮ್ಮ ಕೋರಿಕೆಗೆ ಶುಕ್ರವಾರ ಬೆಳಗ್ಗೆ ಪ್ರತಿಕ್ರಿಯಿಸಿರುವ ಅಧಿಕೃತ ಆಯೋಗದ ಅಧ್ಯಕ್ಷರು, ಕೆಲವೊಂದು ತೀರ್ಪು ತಪ್ಪಾಗಿದೆ. ಭಾರತದ ಪಂದ್ಯಗಳತ್ತ ವಿಶೇಷ ಗಮನ ಹರಿಸುವುದಾಗಿ ತಿಳಿಸಿದ್ದಾರೆ’’ ಎಂದು ಭಾರತದ ಕುಸ್ತಿ ಒಕ್ಕೂಟ ತಿಳಿಸಿದೆ.

ಬಜರಂಗ್ ಗುರುವಾರ ನಡೆದ ಚಾಂಪಿಯನ್‌ಶಿಪ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಉತ್ತರ ಕೊರಿಯಾದ ಜೊಂಗ್ ಸನ್ ವಿರುದ್ಧ 8-1 ಅಂತರದಿಂದ ಜಯ ಸಾಧಿಸಿ 2020ರ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದರು. ಸೆಮಿ ಫೈನಲ್‌ಗೆ ತಲುಪಿದ್ದ ವಿಶ್ವದ ನಂ.1 ಕುಸ್ತಿಪಟು ಬಜರಂಗ್ 65 ಕೆಜಿ ವಿಭಾಗದಲ್ಲಿ ನಿಯಾಝ್‌ಬೆಕೊವ್ ವಿರುದ್ಧ 9-9ರಿಂದ ಸಮಬಲ ಸಾಧಿಸಿದರು. ಅಂಪೈರ್‌ಗಳು ಕಝಖ್‌ಸ್ತಾನದ ಕುಸ್ತಿಪಟುವನ್ನು ವಿಜಯಿ ಎಂದು ಘೋಷಿಸಿದರು. ಅಂಪೈರ್‌ಗಳ ಈ ನಿರ್ಧಾರವನ್ನು 2012ರ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಜಯಿಸಿದ್ದ ಯೋಗೇಶ್ವರ ದತ್ತ ಟ್ವಿಟರ್‌ನ ಮೂಲಕ ಟೀಕಿಸಿದ್ದರು. ಬಜರಂಗ್ ಹಾಗೂ ನಿಯಾಝ್‌ಬೆಕೊವ್ ನಡುವೆ ನಡೆದ ಸೆಮಿ ಫೈನಲ್ ಪಂದ್ಯವನ್ನು ವೀಕ್ಷಿಸಿದ ಬಳಿಕ ತಪ್ಪು ಹಾಗೂ ಸರಿಯನ್ನು ಯಾರೂ ಕೂಡ ಬೇರ್ಪಡಿಸಬಹುದು. ಹಾಗಿರುವಾಗ ಅಂಪೈರ್‌ಗಳು ಇದನ್ನು ಏಕೆ ನೋಡಿಲ್ಲ? ಇಂತಹ ದೊಡ್ಡ ಟೂರ್ನಮೆಂಟ್‌ನಲ್ಲಿ ಬೇಜವಾಬ್ದಾರಿತನ ಪ್ರದರ್ಶಿಸಲಾಗಿದೆ. ಕಝಖ್ ಕುಸ್ತಿಪಟು ತಪ್ಪು ರೀತಿಯಲ್ಲಿ ಆಡುತ್ತಿರುವುದನ್ನು ಎಲ್ಲರೂ ನೋಡಿದ್ದಾರೆ’’ ಎಂದು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News