ನೆರೆ ಪರಿಹಾರ ನೀಡದ ಕೇಂದ್ರದ ಕ್ರಮ ಖಂಡಿಸಿ ಬಿಜೆಪಿಯ 25 ಸಂಸದರ ಅಣಕು ಶವಯಾತ್ರೆ

Update: 2019-09-21 14:06 GMT

ಬೆಂಗಳೂರು, ಸೆ.21: ಕೇಂದ್ರ ಸರಕಾರ ಕೂಡಲೇ ಹತ್ತು ಸಾವಿರ ಕೋಟಿ ರೂ. ನೆರೆ ಪರಿಹಾರ ಘೋಷಿಸದಿದ್ದರೆ ಅ.16ರಂದು ಸಂಸತ್ ಎದುರು ಬಿಜೆಪಿಯ 25 ಸಂಸದರ ಅಣಕು ಶವಯಾತ್ರೆಯ ಮೂಲಕ ಪ್ರತಿಭಟಿಸಲಾಗುವುದು ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ತಿಳಿಸಿದೆ.

ಶನಿವಾರ ನಗರದ ಮೌರ್ಯ ವೃತ್ತದ ಬಳಿ ನೆರೆ ಸಂತ್ರಸ್ತರ ನೆರವಿಗೆ ಬಾರದ ಕೇಂದ್ರ ಸರಕಾರದ ನಡೆ ಖಂಡಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ರಾಜ್ಯದ ಬಿಜೆಪಿ ಸಂಸದರ ಅಣಕು ಶವಯಾತ್ರೆಯ ಮೂಲಕ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್‌ಗೌಡ, ನೆರೆಯಿಂದ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳ 87 ಮಂದಿ ಮೃತಪಟ್ಟಿದ್ದು, ನೂರಾರು ಮನೆಗಳು ಕುಸಿದಿವೆ. ಮನೆಯಲ್ಲಿದ್ದ ಭೂ ದಾಖಲೆ, ಆಧಾರ್, ಪಡಿತರ ಚೀಟಿ ಸೇರಿ ವಿವಿಧ ದಾಖಲೆಗಳು ನಾಶವಾಗಿವೆ. 5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಹಾನಿಯಾಗಿದ್ದು, 1 ಲಕ್ಷ ಕೋಟಿ ರೂ. ಅಧಿಕ ನಷ್ಟ ಸಂಭವಿಸಿದೆ. ಆದರೆ, ಕೇಂದ್ರದ ಇಬ್ಬರು ಸಚಿವರು ಭೇಟಿ ನೀಡಿದರೇ ಹೊರೆತು ಈವರೆಗೂ ಅನುದಾನ ನೀಡಿಲ್ಲ. ಆದ್ದರಿಂದ ಕೇಂದ್ರ ಕೂಡಲೇ 10 ಸಾವಿರ ಅನುದಾನ ಘೋಷಿಸಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸರಕಾರ ತಮಿಳುನಾಡು, ಕೇರಳಕ್ಕೆ ಸಾವಿರಾರು ಕೋಟಿ ರೂ. ನೆರೆ ಪರಿಹಾರ ನೀಡಿದೆ. ಆದರೆ, ರಾಜ್ಯಕ್ಕೆ ಬಿಡಿಗಾಸು ನೀಡಿಲ್ಲ. ಜಿಎಸ್‌ಟಿ ಮೂಲಕ ರಾಜ್ಯದಿಂದ ಸಾವಿರಾರು ಕೋಟಿ ರೂ. ಕೇಂದ್ರಕ್ಕೆ ಹೋಗುತ್ತಿದ್ದು, ಕೇಂದ್ರ ತಾರತಮ್ಯ ಧೋರಣೆ ಅನುಸರಿಸುತ್ತಿದೆ. ರಾಜ್ಯದಿಂದ 25 ಬಿಜೆಪಿ ಸಂಸದರು ಆಯ್ಕೆಯಾಗಿದ್ದು, ನೆರೆ ಉಂಟಾದ ಪ್ರದೇಶಗಳ ಸಂಸದರು ಬಿಜೆಪಿಯವರೇ ಆಗಿದ್ದಾರೆ. ಆದರೆ, ಅನುದಾನ ಸಂಬಂಧ ಸಂಸದರು ಕೇಂದ್ರದ ಮೇಲೆ ಒತ್ತಡ ಹಾಕಿಲ್ಲ. ಹೀಗಾಗಿ, ಸಂಸದರು ಪರಿಹಾರದ ಬಗ್ಗೆ ಧ್ವನಿ ಎತ್ತದಿದ್ದರೆ ಸಂಸದರ ಮನೆಗಳಿಗೆ ಮುತ್ತಿಗೆ, ಅವರ ಕಾರ್ಯಕ್ರಮಗಳಲ್ಲಿ ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಹಾಗೂ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯ ಉಪಾಧ್ಯಕ್ಷ ಶ್ರೀಧರ್, ರಾಮನಗರ ಜಿಲ್ಲಾ ಉಪಾಧ್ಯಕ್ಷ ಯೋಗೀಶ್‌ಗೌಡ, ಮಹಿಳಾ ಘಟಕದ ಅಧ್ಯಕ್ಷೆ ಮಂಗಳಮ್ಮ, ಕೋಲಾರ ಜಿಲ್ಲಾಧ್ಯಕ್ಷ ಮಣಿ, ಕಾರ್ಮಿಕ ಘಟಕದ ಅಧ್ಯಕ್ಷ ಹರೀಶ್, ಯುವ ಘಟಕದ ಉಪಾಧ್ಯಕ್ಷ ರಂಜಿತ್, ಪದಾಧಿಕಾರಿ ಚಂದ್ರೇಗೌಡ, ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News