ಎರಡು ರೂ.ಗೆ ಸೈಕಲ್ ಹತ್ತಿ...

Update: 2019-09-21 13:51 GMT

        ಸಂಜಯ ಮಹಜನ, ಬನಹಟ್ಟಿ

ಬಾಲ್ಯದ ದಿನಗಳಲ್ಲಿ ಕಲಿತಂತಹ ಜೀವನಪಾಠ ಅಪಾರ. ಅವುಗಳನ್ನು ನೆನಪಿಸಿಕೊಂಡಾಗ ನಮ್ಮ ಮುಂದೆ ಹಲವಾರು ಚಿತ್ರಗಳು ಬಂದು ಹೋಗುವವು. ನಾವು ಬಾಲ್ಯದಲ್ಲಿ ಕಲಿತಂತಹ ವಿದ್ಯೆಯಂತೂ ನನ್ನ ಜೀವನದ ಪಾಠವಾಗಿ ಬಿಡುವುದು. ನಾನು ಆರನೇ ತರಗತಿಯಲ್ಲಿ ಓದುವ ಸಂದರ್ಭವದು, ಶಾಲೆಗೆ ರಜೆ ಬಂತೆಂದರೆಸಾಕು ಮನದಲ್ಲಿ ಎಲ್ಲಿಲ್ಲದ ಖುಷಿ-ಸಂತೋಷ. ಮನೆಯಲ್ಲಿ, ಊರಿನ ಬೀದಿಗಳಲ್ಲಿ ಎಲ್ಲ ಜನರು ಯಾಕಾದರು ಈ ಹುಡುಗರಿಗೆ ಶಾಲೆಗೆ ರಜೆ ಕೊಡ್ತಾರೊ....? ಎನ್ನುವಷ್ಟು ನಮ್ಮ ದಾಂಧಲೆ ಆಗಿತ್ತು.

ಇಗಿನಂತೆ ಆಗ ಬೈಕುಗಳ ಹಾವಳಿ ಕಡಿಮೆ. ಸೈಕಲ್ಲುಗಳದ್ದೆ ರಾಜ ದರ್ಬಾರಾಗಿತ್ತು. ಆಗಿನ್ನು ಊರಿನ ಓಣಿಗಳಲ್ಲಿ ಸಿಮೆಂಟ್ ರಸ್ತೆಗಳಾಗಿರಲಿಲ್ಲ. ಸೈಕಲ್ ಹಾಗೂ ಅದರ ಬಿಡಿ ಭಾಗಗಳು ಹಾಳಾಗುವುದು ಸರ್ವೇಸಾಮಾನ್ಯವಾಗಿತ್ತು. ಸೈಕಲ್ ಅಂಗಡಿಗಳಂತೂ ಅಲ್ಲಲ್ಲಿ ಇರುತ್ತಿದ್ದವು ಅವುಗಳಲ್ಲಿ ಕೆಲವು ಅಂಗಡಿಗಳಲ್ಲಿ ಸೈಕಲ್‌ಗಳನ್ನು ತಾಸಿಗೆ ಇಂತಿಷ್ಟು ರೂ. ಎಂದು ದೊಡ್ಡ-ಸಣ್ಣ ಸೈಕಲ್‌ಗಳನ್ನು ಬಾಡಿಗೆಗೆ ಕೊಡುತ್ತಿದ್ದರು. ಅವುಗಳನ್ನೇ ಜನರು ಸಾರಿಗೆ ಸಂಪರ್ಕಕ್ಕಾಗಿ, ಮಕ್ಕಳು ಸೈಕಲ್ ಕಲಿಯಲು ಬಳಸುತ್ತಿದ್ದರು. ಅದರಲ್ಲೂ ಅವರು ಕೊಡುವ ಸಣ್ಣ ಸೈಕಲ್‌ನತ್ತ ನಮ್ಮ ಗಮನ. ಶಾಲೆಯ ರಜಾದಿನ ಮನೆಯಲ್ಲಿ ತಾಯಿ ಹತ್ತಿರ ಸೈಕಲ್ ತರಲು ಎರಡು ರೂ. ಕೇಳಿದಾಗ ಎಲ್ಲಾದ್ರೂ ಬಿದ್ದು ಏನಾದ್ರೂ ಮಾಡಿಕೊಂಡಿಯಾ? ಯಾರಿಗಾದ್ರೂ ದುದ್ದಿದ್ರೆ? ಕೊಡೋದಿಲ್ಲ ಎನ್ನುತ್ತಿದ್ದಳು. ನಾನು ಊಟ ಮಾಡೋದಿಲ್ಲ ಎಂದು ಮನೆಯ ಕಟ್ಟೆ ಮೇಲೆ ಮೌನವಾಗಿ ಹಠ ಹಿಡಿದು ಕುಳಿತು ಬಿಡುತ್ತಿದ್ದೆ. ನಂತರ ತಾಯಿ ಕರುಳು. ಮಗಾ ಊಟ ಮಾಡಲಿ ಎನ್ನುವ ಕಾಳಜಿಯಿಂದ ಎರಡು ರೂ. ಕೊಡುತ್ತಿದ್ದಳು. ಕೊನೆಗೂ ತಾಯಿಯನ್ನು ಕಾಡಿ-ಬೇಡಿ ಮನವೊಲಿಸಿ ಹಣ ಪಡೆದ ನನ್ನ ಪಯಣ ಸೀದಾ ಸೈಕಲ್ ಅಂಗಡಿಗೆ. ಎರಡು ರೂ. ಕೊಟ್ಟು ಸೈಕಲ್ ಒಂದುತಾಸಿನ ಮಟ್ಟಿಗೆ ಬಾಡಿಗೆ ಪಡೆದು ಅಂಗಡಿಯ ಮಾಲಕನಿಂದ ಸಮಯ ತಿಳಿದು ಒಂದು ಗಂಟೆಯ ನಂತರ ಸೈಕಲ್ ಮರಳಿ ಕೊಡುವುದು ನಿಯಮವಾಗಿತ್ತು.

ಆ ಒಂದು ಗಂಟೆಯಲ್ಲಿ ಮನೆಯ ಹತ್ತಿರದಲ್ಲೇ ಇದ್ದ ಮೈದಾನದಲ್ಲಿ ಸೈಕಲ್ ಕಲಿಯಲೆಂದು ಹಲವರು ನನ್ನಂತೆ ಸೈಕಲ್ ಬಾಡಿಗೆ ಪಡೆದವರಿರುತ್ತಿದ್ದರು. ಅಲ್ಲಿ ಸ್ನೇಹಿತರ ಸಹಾಯದಿಂದ ಬೀಳುತ್ತಾ-ಏಳುತ್ತಾ, ಅನೇಕ ಗಾಯ ಮಾಡಿಕೊಂಡು ಅಂತೂ ಶತಾಯ ಗತಾಯ ಸೈಕಲ್ ಕಲಿಯದೆ ಬಿಡಲಿಲ್ಲ. ಎಷ್ಟೋಸಾರಿ ಅಲ್ಲಲ್ಲಿ ಎಷ್ಟೋ ಜನರಿಗೆ ಗುದ್ದಿ ಬೈಸಿಕೊಂಡದ್ದೂ ಉಂಟು.

ಸೈಕಲ್ ಕಲಿತ ನಮ್ಮ ಸ್ನೇಹಿತರ ಬಳಗವೆಲ್ಲಾ ಮೊದಮೊದಲು ಒಂದು ಕೈ ನಂತರ, ಎರಡು ಕೈಬಿಟ್ಟು, ಕಾಲುಗಳನ್ನು ಫೆಡಲ್‌ನಿಂದ ಮೇಲಕ್ಕೆತ್ತುವ, ಸೀಟು ಬಿಟ್ಟು ಕ್ಯಾರಿಯರ್ ಮೇಲೆ ಕುಳಿತು ಸೈಕಲ್ ಓಡಿಸಿ ಸೈಕಲ್ ಸರ್ಕಸ್ ಮಾಡಿದ್ದನ್ನು ಎಂದಿಗೂ ಮರೆಯಲಾರೆವು. ಇದಕ್ಕೆ ಕೈಕಾಲು ಮಣ್ಣು, ಗಾಯ ಮಾಡಿಕೊಂಡು ಮನೆಗೆ ಬಂದಾಗ ತಾಯಿ ಗಾಯದಿಂದ ಸುರಿಯುವ ರಕ್ತ ಕಂಡು ಹೃದಯ ಹಿಂಡಿದಂತಾಗಿ ಬೈಯುತ್ತಾ ಅರಿಶಿಣ ಪುಡಿ ಹಚ್ಚಿದ ನೆನಪು. ನಂತರ ತಂದೆ ಪ್ರೀತಿಯಿಂದ ಹುಟ್ಟಿದ ಹಬ್ಬದ ದಿನದಂದು ಒಂದು ಸೈಕಲ್ ಕೊಡಿಸಿದರು. ಅದರ ಮೇಲೆ ಮನೆಯಿಂದ ದೂರದಲ್ಲಿದ್ದ ಶಾಲೆ-ಕಾಲೇಜಿಗೆ ಹೋಗಿ ಬರುತ್ತಾ ಕಾಲೇಜು ಮುಗಿಸಿ ಇಂದಿಗೂ ಆ ಸೈಕಲ್ ನಮ್ಮ ಮನೆಯಲ್ಲಿದೆ. ಈಗ ಯಾರಾದರು ಸೈಕಲ್ ತೆಗೆದುಕೊಂಡು ಹೋಗುವುದನ್ನು ಕಂಡಾಗ, ಮಕ್ಕಳು ಸೈಕಲ್ ಕಲಿಯುವುದನ್ನು ನೋಡಿದಾಗ ಬಾಲ್ಯದ ಗಾಯದ ಕಲೆಯನ್ನು, ಮನೆಯಲ್ಲಿನ ಸೈಕಲ್ ಕಂಡಾಗಲೆಲ್ಲಾ ಬಾಲ್ಯದ ಎರಡು ರೂ. ಸೈಕಲ್ ಕಲಿತ ಚಿತ್ರವು ಮನಸ್ಸಿನಲ್ಲಿ ಹಚ್ಚ ಹಸಿರಾಗಿ ಮತ್ತೆ ಅದೇ ಚಿಕ್ಕ ಸೈಕಲ್ ಹತ್ತುವ ಆಸೆ. ಆದರೆ ಏನು ಮಾಡುವುದು ಕಾಲ ಚಕ್ರ ನನ್ನನ್ನು ಮುಂದೆ ತಳ್ಳಿದೆ.

Writer - ಸಂಜಯ ಮಹಜನ, ಬನಹಟ್ಟಿ

contributor

Editor - ಸಂಜಯ ಮಹಜನ, ಬನಹಟ್ಟಿ

contributor

Similar News