ಮಠಗಳಿಗೆ ಹಣ ನೀಡಿ ಬಜೆಟ್ ಪಾವಿತ್ರ್ಯತೆ, ಪ್ರಜಾಪ್ರಭುತ್ವದ ಮೌಲ್ಯ ಹಾಳು ಮಾಡಿದ್ದಾರೆ: ಎಸ್.ಜಿ.ಸಿದ್ದರಾಮಯ್ಯ

Update: 2019-09-21 14:23 GMT

ಬೆಂಗಳೂರು, ಸೆ.21: ಸರಕಾರ ಬಜೆಟ್ ನಲ್ಲಿ ಮಠಗಳಿಗೆ ಹಣವನ್ನು ಮೀಸಲಿಡುವ ಮೂಲಕ ಬಜೆಟ್ ಪಾವಿತ್ರ್ಯತೆ ಹಾಗೂ ಪ್ರಜಾಪ್ರಭುತ್ವದ ಮೌಲ್ಯವನ್ನು ಹಾಳು ಮಾಡಲಾಯಿತು ಎಂದು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ವಿಷಾದಿಸಿದರು.

ಶನಿವಾರ ನಗರದ ಪುರಭವನದಲ್ಲಿ ಆಯೋಜಿಸಿದ್ದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೌಕರರ ಪತ್ತಿನ ಸಹಕಾರ ಸಂಘದ 20ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಮತ್ತು ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ರಾಜ್ಯದ ಅಭಿವೃದ್ದಿಗಾಗಿ ಬಜೆಟ್ ನ ಹಣ ಹಂಚಿಕೆಯಾಗಬೇಕು. ಆದರೆ, ನಮ್ಮ ಸರಕಾರಗಳು ಜನತೆಯ ತೆರಿಗೆ ಹಣವನ್ನು ಪಾಕೆಟ್ಮನಿ ನೀಡುವ ರೀತಿಯಲ್ಲಿ ಮಠಗಳಿಗೆ ನೀಡುವ ಮೂಲಕ ಬಜೆಟ್‌ನ ಪಾವಿತ್ರ್ಯತೆಯನ್ನು ಹಾಳು ಮಾಡಿದ್ದಾರೆ. ಈ ಬಗ್ಗೆ ರಾಜ್ಯ ಸರಕಾರಗಳು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಅವರು ಹೇಳಿದರು.

ಇವತ್ತು ದೇಶದಲ್ಲಿ ಭ್ರಷ್ಟತೆ ಮತ್ತು ಜಾತೀಯತೆ ಮಿತಿಮೀರಿ ಬೆಳೆದಿದೆ. ಕೆಲವು ಭ್ರಷ್ಟರು ನಮ್ಮ ರಕ್ಷಣೆಗೆ ಮಠಗಳು ಬರಲಿವೆ ಎಂಬ ಧೈರ್ಯದಿಂದಲೇ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಸಮಾಜದಲ್ಲಿ ಜಾತಿಗೊಂದು ಮಠಗಳು ನಿರ್ಮಾಣವಾಗಿ ನೇರವಾಗಿ ರಾಜಕೀಯದಲ್ಲಿ ಗುರುತಿಸಿಕೊಳ್ಳುವ ಮೂಲಕ ಪ್ರಜಾಪ್ರಭುತ್ವ ಮೌಲ್ಯಗಳನ್ನು ಹಾಳು ಮಾಡುತ್ತಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ತಪ್ಪುದಾರಿಯತ್ತ ಯುವಜನತೆ: ನಮ್ಮ ನೆಲಮೂಲ ಸಂಸ್ಕೃತಿಯನ್ನು ತಿಳಿಯದ ಇಂದಿನ ಯುವಜನತೆ ಧಾರ್ಮಿಕ ಮೂಲಭೂತವಾದಿಗಳ ಕೈಗೆ ಸಿಲುಕಿ ದಾರಿ ತಪ್ಪುತ್ತಿದ್ದಾರೆ. ಇವರನ್ನು ಸರಿದಾರಿಗೆ ತರುವಂತಹ ಕೆಲಸವನ್ನು ಪೋಷಕರು ಮತ್ತು ಜನಪರವಾದ ಸಂಘ, ಸಂಸ್ಥೆಗಳು ಮಾಡಬೇಕಿದೆ ಎಂದು ಅವರು ಆಶಿಸಿದರು.

ಭಾರತ ಯಾವತ್ತೂ ಒಂದು ಧರ್ಮ, ಒಂದು ಭಾಷೆ, ಒಂದು ಸಂಸ್ಕೃತಿಯ ನೆಲೆಯಾಗಿರಲಿಲ್ಲ. ಇಲ್ಲಿ ಎಲ್ಲಾ ಧರ್ಮಕ್ಕೂ ಸೇರಿದಂತೆ ಸಕಲ ಜೀವರಾಶಿಗಳು ಪ್ರಧಾನವಾದ ಮಾನ್ಯತೆ ಇದೆ. ಇಂತಹ ಬಹುತ್ವ ಸಂಸ್ಕೃತಿಯನ್ನು ನಾಶ ಮಾಡುವುದಕ್ಕಾಗಿಯೇ ಕೆಲವು ಮೂಲಭೂತವಾದಿಗಳು ಹೊಂಚು ಹಾಕುತ್ತಿದ್ದಾರೆ. ಈ ಬಗ್ಗೆ ನಾವು ಎಚ್ಚರದಿಂದಿರಬೇಕೆಂದು ಅವರು ಹೇಳಿದರು.

ಕೆಎಸ್ಆರ್ಟಿಸಿ ನೌಕರರ ಸಂಘದ ಅಧ್ಯಕ್ಷ ಎಚ್.ವಿ.ಅನಂತ ಸುಬ್ಬರಾವ್ ಮಾತನಾಡಿ, ದೇಶದಲ್ಲಿ ಲಕ್ಷಾಂತರ ಸಹಕಾರಿ ಸಂಘಗಳಿವೆ. ಇದರಲ್ಲಿ ಬಹುತೇಕ ಸಂಘಗಳು ಭ್ರಷ್ಟಾಚಾರದಿಂದ ಹಾಳಾಗಿವೆ. ಆದರೆ, ಇದಕ್ಕೆ ಅಪವಾದವೆಂಬಂತೆ ಬಿಎಂಟಿಸಿ ನೌಕರರ ಪತ್ತಿನ ಸಹಕಾರ ಸಂಘ ಕಳೆದ 20ವರ್ಷದಿಂದ ನೌಕರರ ಆಶಯಗಳಿಗೆ ಅನುಸಾರವಾಗಿ ಮುನ್ನಡೆಯುತ್ತಿರುವುದು ಸಂತಸದ ವಿಚಾರವೆಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಳೆದ ನಾಲ್ಕೈದು ವರ್ಷಗಳಲ್ಲಿ ದೇಶದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಇದರಿಂದ ಸಾಮಾನ್ಯ ಜನತೆ ತತ್ತರಿಸಿ ಹೋಗಿದ್ದಾರೆ. ಈ ಭ್ರಷ್ಟರಿಗೆ ಜಾತಿ ಹಾಗೂ ಮಠಗಳು ಶ್ರೀರಕ್ಷೆಯಾಗಿ ಕೆಲಸ ಮಾಡುತ್ತಿವೆ. ಇಂತಹ ವಾತಾವರಣ ಬದಲಾಗದ ಹೊರತು ಯಾವ ಕ್ಷೇತ್ರವು ಅಭಿವೃದ್ಧಿ ಕಾಣಲಾರದು ಎಂದು ಅವರು ಹೇಳಿದರು.

ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ ಮಾತನಾಡಿ, ಇವತ್ತಿನ ಕಾರ್ಯಕ್ರಮದಲ್ಲಿ ಹೆಚ್ಚಿನ ಅಂಕ ಪಡೆದ ಎಸೆಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡುತ್ತಿರುವುದು ಒಳ್ಳೆಯ ವಿಚಾರ. ಹಾಗೆಯೇ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಹೋಗುವ ಸಂದರ್ಭದಲ್ಲಿ ವಿಷಯವನ್ನು ಆಯ್ಕೆ ಮಾಡುವಾಗ ಆಸಕ್ತಿ, ಅವಕಾಶಗಳನ್ನು ಅರಿಯಲಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಬಿಬಿಎಂಪಿ ನೌಕರರ ಪತ್ತಿನ ಸಹಕಾರ ಸಂಘದ ಚೆಕ್ಕನ್ನು ವಿತರಿಸಲಾಯಿತು. ಈ ವೇಳೆ ವಿಧಾನಪರಿಷತ್ ಸದಸ್ಯ ಅ.ದೇವೇಗೌಡ, ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆರ್.ಕೃಷ್ಣ ಮತ್ತಿತರರಿದ್ದರು.

ಬಿಎಂಟಿಸಿಯನ್ನು ಸದ್ಯದ ಪರಿಸ್ಥಿತಿಯಿಂದ ಮತ್ತಷ್ಟು ಉನ್ನತ ಹಂತಕ್ಕೇರಿಸುವ ನಿಟ್ಟಿನಲ್ಲಿ ಸರಿಯಾದ ಕಾರ್ಯ ಯೋಜನೆಗಳನ್ನು ರೂಪಿಸಿ, ಅನುಷ್ಠಾನಕ್ಕೆ ತರಲಾಗುತ್ತಿದೆ. ಸಂಸ್ಥೆಯ ಪ್ರತಿಯೊಬ್ಬ ಅಧಿಕಾರಿಗಳು, ನೌಕರರೊಟ್ಟಿಗೆ ಸೇರಿ ಬಿಎಂಟಿಸಿಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲಾಗುವುದು.

-ಸಿ.ಶಿಖಾ, ವ್ಯವಸ್ಥಾಪಕ ನಿರ್ದೇಶಕಿ, ಬಿಎಂಟಿಸಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News