ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಎನ್‌ಜಿಓಗಳ ಪಾತ್ರ ಮಹತ್ವದ್ದು: ಜಿ.ಎ.ಬಾವಾ

Update: 2019-09-21 14:25 GMT

ಬೆಂಗಳೂರು, ಸೆ.21: ಕೇಂದ್ರ ಹಾಗೂ ರಾಜ್ಯ ಸರಕಾರದ ಕಾರ್ಯಕ್ರಮಗಳು, ಯೋಜನೆಗಳ ಸಮರ್ಪಕ ಅನುಷ್ಠಾನದಲ್ಲಿ ಸ್ವಯಂ ಸೇವಾ ಸಂಸ್ಥೆ(ಎನ್‌ಜಿಓ)ಗಳ ಪಾತ್ರ ಅತ್ಯಂತ ಮಹತ್ವದ್ದು ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಜಿ.ಎ.ಬಾವಾ ತಿಳಿಸಿದರು.

ಶನಿವಾರ ನಗರದ ಕಬ್ಬನ್‌ಪೇಟೆ ಮುಖ್ಯರಸ್ತೆಯಲ್ಲಿರುವ ಹಝ್ರತ್ ಹಮೀದ್ ಷಾ ಕಾಂಪ್ಲೆಕ್ಸ್ ಆವರಣದಲ್ಲಿರುವ ಉರ್ದು ಹಾಲ್‌ನಲ್ಲಿ ರಾಜ್ಯ ಅಲ್ಪಸಂಖ್ಯಾತರ ಆಯೋಗದ ವತಿಯಿಂದ ಆಯೋಜಿಸಲಾಗಿದ್ದ ಸ್ವಯಂ ಸೇವಾ ಸಂಸ್ಥೆಗಳ ಜಾಗೃತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಎನ್‌ಜಿಓಗಳು ತಳಮಟ್ಟದಲ್ಲಿ ಜನಸಾಮಾನ್ಯರೊಂದಿಗೆ ನಿಕಟ ಸಂಪರ್ಕವನ್ನು ಹೊಂದಿರುತ್ತವೆ. ಸರಕಾರದ ಆಡಳಿತಯಂತ್ರ ತಲುಪದ ಸ್ಥಳಗಳಿಗೂ ಎನ್‌ಜಿಓಗಳು ತಲುಪಿ ಕೆಲಸ ಮಾಡುತ್ತವೆ. ಆದುದರಿಂದ, ಕೇಂದ್ರ ಹಾಗೂ ರಾಜ್ಯ ಸರಕಾರದಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಸಂಬಂಧಿಸಿದಂತೆ ಇರುವ ಯೋಜನೆಗಳು, ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲು ಈ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಅವರು ಹೇಳಿದರು.

ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮ, ಅಲ್ಪಸಂಖ್ಯಾತರ ನಿರ್ದೇಶನಾಲಯ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ರಾಜ್ಯ ವಕ್ಫ್ ಕೌನ್ಸಿಲ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳಲ್ಲಿರುವ ಕಾರ್ಯಕ್ರಮಗಳ ಕುರಿತು ಎನ್‌ಜಿಓಗಳ ಪ್ರತಿನಿಧಿಗಳಿಗೆ ಮಾಹಿತಿ ಒದಗಿಸಲಾಗಿದೆ ಎಂದು ಜಿ.ಎ.ಬಾವಾ ತಿಳಿಸಿದರು.

ಎನ್‌ಜಿಓಗಳನ್ನು ರಚಿಸಿಕೊಂಡು ಸರಕಾರದ ಯೋಜನೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಕಂಡು ಬಂದರೆ ಅಥವಾ ಈ ಸಂಬಂಧ ನಮ್ಮ ಕಚೇರಿಗೆ ದೂರುಗಳು ಬಂದಲ್ಲಿ ಪರಿಶೀಲಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು. ಬಡವರು, ಆರ್ಥಿಕವಾಗಿ ಹಿಂದುಳಿದವರು, ಅವಕಾಶ ವಂಚಿತರಿಗಾಗಿ ಸರಕಾರ ಯೋಜನೆಗಳನ್ನು ರೂಪಿಸುತ್ತದೆ. ಯಾವುದೇ ಕಾರಣಕ್ಕೂ ಅವುಗಳ ದುರುಪಯೋಗವಾಗಬಾರದು ಎಂದು ಅವರು ಹೇಳಿದರು.

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಉದಯ್ ಬಿ.ಗರುಡಾಚಾರ್ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ, ಅನುದಾನವನ್ನು ಒದಗಿಸುತ್ತವೆ. ಆದರೆ, ಇವುಗಳ ಬಗ್ಗೆ ಸೂಕ್ತ ಮಾಹಿತಿ ಇಲ್ಲದೆ ಈ ಸಮುದಾಯಗಳು ಅವಕಾಶ ವಂಚಿತವಾಗುತ್ತಿರುವುದು ಬೇಸರದ ಸಂಗತಿ ಎಂದರು.

ರಾಜ್ಯ ಅಲ್ಪಸಂಖ್ಯಾತರ ಆಯೋಗವು ಜಿ.ಎ.ಬಾವಾ ನೇತೃತ್ವದಲ್ಲಿ ಎನ್‌ಜಿಓಗಳನ್ನು ಸೇರಿಸಿ ಈ ಬಗ್ಗೆ ಜಾಗೃತಿ ಶಿಬಿರವನ್ನು ಹಮ್ಮಿಕೊಂಡಿರುವುದು ಸ್ವಾಗತಾರ್ಹ. ಅಲ್ಪಸಂಖ್ಯಾತ ಸಮುದಾಯ ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬೇಕಿದೆ. ನಿಮ್ಮ ಹಕ್ಕುಗಳನ್ನು ನೀವು ಕೇಳಿ ಪಡೆಯಬೇಕು. ಸುಮ್ಮನೆ ಕೈ ಕಟ್ಟಿ ಕೂತಿದ್ದರೆ ಯಾವ ಸೌಲಭ್ಯಗಳು ಸಿಗುವುದಿಲ್ಲ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಕಾರ್ಯದರ್ಶಿ ಅನೀಸ್ ಸಿರಾಜ್, ಅಲ್ಪಸಂಖ್ಯಾತರ ನಿರ್ದೇಶನಾಲಯದ ಜಂಟಿ ನಿರ್ದೇಶಕ ನಯಾಝ್ ಪಾಷ, ಸ್ಕಾಲರ್‌ಶಿಪ್ ವಿಭಾಗದ ಅದಾ ಫಾತಿಮಾ, ಕೆಎಂಡಿಸಿ ಅಧಿಕಾರಿ ಶಬ್ಬೀರ್ ಅಹ್ಮದ್, ವಕ್ಫ್ ಬೋರ್ಡ್ ಅಧಿಕಾರಿ ಮುಜೀಬ್ ಉಲ್ಲಾ ಝಫಾರಿ, ವಕ್ಫ್ ಕೌನ್ಸಿಲ್ ಅಧಿಕಾರಿ ಅಬ್ಬಾಸ್ ಶರೀಫ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಸಲ್ಮಾ ಸಾದಿಖಾ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ರೇಣು ಸೇರಿದಂತೆ ಇನ್ನಿತರರು ವಿಷಯ ಮಂಡನೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News