ತಾಂಡಾಗಳಲ್ಲಿ ಚಾಲ್ತಿಯಲ್ಲಿರುವ ಕಾಮಗಾರಿ ತುರ್ತಾಗಿ ಪೂರ್ಣಗೊಳಿಸಿ: ಅಧಿಕಾರಿಗಳಿಗೆ ಉಮೇಶ್ ಜಾದವ್ ಸೂಚನೆ

Update: 2019-09-21 14:41 GMT

ಬೆಂಗಳೂರು, ಸೆ.21: ತಾಂಡಾಗಳಲ್ಲಿ ನಿರಂತರವಾಗಿ ಕೌಶಲ್ಯಾಭಿವೃದ್ಧಿ ಮತ್ತು ಆರ್ಥಿಕ ಉತ್ತೇಜನ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಉದ್ದೇಶದಿಂದ ಚಾಲನೆಯಲ್ಲಿರುವ ವಿವಿಧ ಕಾಮಗಾರಿಗಳನ್ನು ತುರ್ತಾಗಿ ಪೂರ್ಣಗೊಳಿಸಲು ಲೋಕಸಭಾ ಸದಸ್ಯ ಉಮೇಶ್ ಜಾದವ್ ಅಧಿಕಾರಿಗಳಿಗೆ ಸೂಚಿಸಿದರು.

ಶನಿವಾರ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದಲ್ಲಿ ಬಂಜಾರ ಆರ್ಥಿಕ ಮತ್ತು ಸಾಂಸ್ಕೃತಿಕ ಉತ್ತೇಜನ ಕೇಂದ್ರ (ಕೌಶಲ್ಯ ಪಾರ್ಕ್) ಯೋಜನೆ ಪ್ರಗತಿಯ ಕುರಿತು ವ್ಯವಸ್ಥಾಪಕ ನಿರ್ದೇಶಕರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಸದರಿ ಪ್ರದೇಶವನ್ನು ಪ್ರೇಕ್ಷಣೀಯ ಸ್ಥಳವನ್ನಾಗಿ ರೂಪಿಸುವಲ್ಲಿ ಕ್ರಿಯಾಯೋಜನೆ ತುರ್ತಾಗಿ ಆಗಬೇಕಿದೆ ಎಂದರು.

ಬಂಜಾರ ಕಸೂತಿ ಕಲೆಯ ತರಬೇತಿ ನೀಡಿ ಪುನಶ್ಚೇತನಗೊಳಿಸುವುದು, ಸಿದ್ಧ ಉಡುಪುಗಳ ಮಾರಾಟ ಕೇಂದ್ರ ಸ್ಥಾಪನೆ, ಔಷಧ ಗಿಡಮೂಲಿಕಗಳ ಸಸ್ಯವನ ನಿರ್ಮಾಣ ಮಾಡುವುದು, ಮದ್ಯವರ್ಜನ ಕೇಂದ್ರ, ಆಧ್ಯಾತ್ಮಿಕ ಕೇಂದ್ರ, ಗೋ ಸಂರಕ್ಷಣಾ ಕೇಂದ್ರ ಮುಂತಾದ ಕಾರ್ಯಕ್ರಮಗಳನ್ನು ಕಾಲಮಿತಿಯೊಳಗೆ ಪ್ರಾರಂಭಿಸಿ ಪೂರ್ಣಗೊಳಿಸಲು ಅವರು ಅಧಿಕಾರಿಗಳಿಗೆ ಹೇಳಿದರು.

ಬಂಜಾರದಲ್ಲಿ ವಲಸೆ ಪ್ರವೃತಿಯನ್ನು ತಡೆಗಟ್ಟಲು ಮತ್ತು ಬಡತನ ನಿರ್ಮೂಲನ ಮಾಡಲು ನಿರುದ್ಯೋಗಿ ಯುವಕ-ಯುವತಿಯರಿಗೆ ವಿವಿಧ ಪ್ರಕಾರದ ಕೌಶಲ್ಯ ತರಬೇತಿಗಳನ್ನು ಒದಗಿಸುವುದು. ಈ ಕೇಂದ್ರದಲ್ಲಿ ಕಸೂತಿ ಕಲೆಯ ನೂತನ ತರಬೇತಿ ಪಡೆದ ಮಹಿಳೆಯರು ತಮ್ಮ ತಮ್ಮ ಗ್ರಾಮಗಳಿಗೆ ಮರಳಿದ ನಂತರ ಸ್ವತಃ ತಾವೇ ಸ್ವಯಂ ಉದ್ಯೋಗ ರೂಪಿಸಿಕೊಳ್ಳಲು ಅಗತ್ಯ ಪ್ರೋತ್ಸಾಹವನ್ನು ನೀಡಬೇಕಿದೆ ಎಂದು ಅವರು ಹೇಳಿದರು.

ಸಭೆಯಲ್ಲಿ ಕಂದಾಯ ಗ್ರಾಮ ಕೋಶದ ನಿರ್ದೇಶಕ ಹೀರಾನಾಯ್ಕ, ಪ್ರಾಜೆಕ್ಟ್ ಮ್ಯಾನೇಜ್ ಮೆಂಟ್‌ನ ಕನ್ಸಲ್‌ಟೆಂಟ್ ಕಿರಣ್ ಕುಮಾರ್ ಶೆಟಕರ್, ಉಪಕುಲಪತಿ ವಿರೂಪಕ್ಷಯ್ಯ, ಚಂದ್ರನಾಯ್ಕ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News