ವಿವಿಧ ಅಪರಾಧ ಪ್ರಕರಣ: ಒಟ್ಟು 334 ಆರೋಪಿಗಳ ಬಂಧನ, 5.28 ಕೋಟಿ ಮೌಲ್ಯದ ಮಾಲು ಜಪ್ತಿ

Update: 2019-09-21 14:50 GMT

ಬೆಂಗಳೂರು, ಸೆ.21: ಸುಲಿಗೆ, ಸರಗಳವು, ಮನೆಗಳ್ಳತನ ಸೇರಿದಂತೆ ವಿವಿಧ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಆರು ತಿಂಗಳ ಅವಧಿಯಲ್ಲಿ 425 ಪ್ರಕರಣಗಳನ್ನು ಪತ್ತೆ ಹಚ್ಚಿರುವ ನಗರದ ಉತ್ತರ ವಿಭಾಗದ ಪೊಲೀಸರು 5.28 ಕೋಟಿ ಮಾಲು ಜಪ್ತಿ ಮಾಡಿರುವುದಲ್ಲದೆ, ಬರೋಬ್ಬರಿ 334 ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪತ್ತೆ ಹಚ್ಚಿರುವ 5 ದರೋಡೆ ಪ್ರಕರಣಗಳಲ್ಲಿ 10 ಮಂದಿ, 69 ಸುಲಿಗೆ ಪ್ರಕರಣಗಳಲ್ಲಿ 101 ಮಂದಿ, 23 ಸರಗಳವು ಪ್ರಕರಣಗಳಲ್ಲಿ 25 ಮಂದಿ, 71 ಮನೆಗಳವು ಕೃತ್ಯದಲ್ಲಿ 49 ಜನರನ್ನು ಬಂಧಿಸಿದರೆ, 236 ವಾಹನ ಕಳವು ಕೃತ್ಯದಲ್ಲಿ 103 ಸೇರಿ ಇನ್ನಿತರೆ ಪ್ರಕರಣಗಳು ಒಳಗೊಂಡಂತೆ 334 ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿಸಿರುವ 334 ಆರೋಪಿಗಳಿಂದ 14 ಲಕ್ಷ 55 ಸಾವಿರ ನಗದು, 4 ಕೆಜಿ 917 ಗ್ರಾಂ. ಚಿನ್ನ, 25 ಕೆಜಿ ಬೆಳ್ಳಿ, 236 ದ್ವಿಚಕ್ರ ವಾಹನಗಳು, 18 ಆಟೊಗಳು, 6 ಕಾರುಗಳು, 2 ಲ್ಯಾಪ್‌ಟಾಪ್, 115 ಮೊಬೈಲ್‌ಗಳೂ ಸೇರಿ 5.28 ಕೋಟಿ ರೂ. ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರ್‌ಟಿ ನಗರದ ಎಚ್‌ಎಂಟಿ ಮೈದಾನದಲ್ಲಿ ಕಳವು ಮಾಲುಗಳನ್ನು ವಾರಸುದಾರರಿಗೆ ಹಿಂದಿರುಗಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಗರ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್ ಅವರು, ಕಳೆದ 6 ತಿಂಗಳ ಅವಧಿಯಲ್ಲಿ 425 ಪ್ರಕರಣಗಳನ್ನು ಪತ್ತೆ ಹಚ್ಚಿ 334 ಮಂದಿ ಆರೋಪಿಗಳನ್ನು ಬಂಧಿಸಿದ ಉತ್ತರ ವಿಭಾಗದ ಪೊಲೀಸರ ಕಾರ್ಯವೈಖರಿಯನ್ನು ಪ್ರಶಂಸಿಸಿದರು. ಪ್ರಕರಣ ದಾಖಲಿಸಿ ಯಾವುದೇ ರೀತಿಯ ದೂರುಗಳು ಬಂದರು ಮೊದಲು ಅವುಗಳನ್ನು ದಾಖಲಿಸಲು ಪೊಲೀಸರು ಮುಂದಾಗಬೇಕು. ಠಾಣೆಯ ವ್ಯಾಪ್ತಿಯನ್ನು ಬದಿಗಿಟ್ಟು ಮೊದಲು ಕೇಸು ದಾಖಲಿಸಿ ನಂತರ ಅವುಗಳನ್ನು ಸಂಬಂಧಿಸಿದ ಠಾಣೆಗೆ ವರ್ಗಾಯಿಸಿ ಪತ್ತೆ ಹಚ್ಚಲು ಕ್ರಮಕೈಗೊಳ್ಳುವಂತೆ ಭಾಸ್ಕರ್ ರಾವ್ ಸೂಚಿಸಿದರು. ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಉಮೇಶ್ ಕುಮಾರ್, ಡಿಸಿಪಿ ಶಶಿಕುಮಾರ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News