ಹಿಂದೂ ರಾಷ್ಟ್ರ ನಿರ್ಮಾಣವೇ ಬಿಜೆಪಿ ಅಜೆಂಡಾ: ಹಿರಿಯ ಪತ್ರಕರ್ತ ಕೆ.ಎನ್.ಹರಿಕುಮಾರ್

Update: 2019-09-21 14:58 GMT

ಬೆಂಗಳೂರು, ಸೆ.21: ಬಿಜೆಪಿ ಮತ್ತು ಆರೆಸ್ಸೆಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇವುಗಳ ಉದ್ದೇಶವೇ ಹಿಂದೂ ರಾಷ್ಟ್ರ ನಿರ್ಮಾಣ ಮಾಡುವುದಾಗಿದೆ ಎಂದು ಹಿರಿಯ ಪತ್ರಕರ್ತ ಕೆ.ಎನ್.ಹರಿಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಶನಿವಾರ ನಗರದ ಸೆಂಟ್ರಲ್ ಕಾಲೇಜಿನಲ್ಲಿ ಬಯಲು ಬಳಗ ಹಾಗೂ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವತಿಯಿಂದ ಆಯೋಜಿಸಿದ್ದ ‘ಮಾಧ್ಯಮ ಹಾಗೂ ವರ್ತಮಾನದ ಸವಾಲುಗಳು’ ವಿಷಯದ ಕುರಿತು ಉಪನ್ಯಾಸ ಹಾಗೂ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಬಿಜೆಪಿ ಮತ್ತು ಆರೆಸ್ಸೆಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇವುಗಳ ಉದ್ದೇಶವೇ ಹಿಂದೂ ರಾಷ್ಟ್ರ ನಿರ್ಮಾಣ ಮಾಡುವುದಾಗಿದೆ. ಆದರೆ, ತಮ್ಮ ಅಜೆಂಡಾವನ್ನು ಸಂಪೂರ್ಣವಾಗಿ ಅನುಷ್ಠಾನ ಮಾಡಲು ಸಾಧ್ಯವಾಗುತ್ತಿಲ್ಲ. ಸ್ವಲ್ಪ ಸ್ವಲ್ಪ ಮಟ್ಟಿಗಾದರೂ ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ ಎಂದು ನುಡಿದರು.

ಸಂವಿಧಾನ ಬದಲಾವಣೆ ಮಾಡಿ, ಹಿಂದುತ್ವ ಪರವಾದ ಸಂವಿಧಾನ ತರಬೇಕು ಎಂದು ವಾಜಪೇಯಿ ಪ್ರಧಾನಿಯಾಗಿದ್ದ ಕಾಲದಿಂದಲೂ ನಡೆದಿದೆ ಎಂದ ಅವರು, ದೇಶದಲ್ಲಿ ಬಿಜೆಪಿ ಅಧಿಕಾರವಿದೆ. ಸುಪ್ರೀಂ ಕೋರ್ಟ್ ನಮ್ಮ ಕೈಯಲ್ಲಿದೆ. ನಾವು ಬೇಕಾದರೆ ರಾಮಮಂದಿರ ನಿರ್ಮಾಣ ಮಾಡುತ್ತೇವೆ ಎಂದು ಉತ್ತರ ಪ್ರದೇಶದ ಒಬ್ಬ ಜನಪ್ರತಿನಿಧಿ ಹೇಳಿದ್ದಾರೆ. ಆದರೆ, ಅದು ಅಷ್ಟು ಸುಲಭದ ಕೆಲಸವಲ್ಲ ಎಂದು ತಿಳಿಸಿದರು.

ಆರೆಸ್ಸೆಸ್ ಹಿಂದುತ್ವದ ಅಜೆಂಡಾ ಹೊಂದಿದ್ದರೂ, ಪ್ರಸ್ತುತ ಸಂದರ್ಭದಲ್ಲಿ ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಕಾರ್ಯಾಚರಣೆ ನಡೆಸುತ್ತಿದೆ. 2014 ರ ಚುನಾವಣೆ ಸಂದರ್ಭದಲ್ಲಿ ಮೋದಿ ಅಯೋಧ್ಯೆ, ರಾಮಮಂದಿರ ನಿರ್ಮಾಣ ಅಂತಹ ವಿಷಯಗಳನ್ನು ಮುಂದಿಟ್ಟಿದ್ದರು. ಆದರೆ, 2018 ರ ಚುನಾವಣೆಯಲ್ಲಿ ಕೇವಲ ಅಭಿವೃದ್ಧಿ ಅಂಶಗಳನ್ನಷ್ಟೇ ಮುಂದಿಟ್ಟು ಚುನಾವಣೆ ಎದುರಿಸಿದರು ಎಂದರು.

ರಾಮ ಮಂದಿರ ನಿರ್ಮಾಣ ಹಾಗೂ ಬಾಬರಿ ಮಸೀದಿ ಧ್ವಂಸ ಸಂಬಂಧ ಆರೆಸ್ಸೆಸ್ ಹಾಗೂ ಬಿಜೆಪಿ ನಾಯಕರು ಸುಪ್ರೀಂಕೋರ್ಟ್‌ನ ಸೂಚನೆಯನ್ನು ಉಲ್ಲಂಘಿಸಿದ್ದಾರೆ. ಪ್ರಜಾಪ್ರಭುತ್ವ ದೇಶದಲ್ಲಿ ಬಹುಪಕ್ಷಗಳಿಂದ ಅಭಿವೃದ್ಧಿ ಅಸಾಧ್ಯ ಎಂದು ಅಮಿತ್ ಶಾ ಹೇಳುತ್ತಾರೆ. ಅಂದರೆ, ಅವರ ಆಲೋಚನಾ ಕ್ರಮ ಏನೆಂಬುದನ್ನು ಯೋಚಿಸಬೇಕಿದೆ ಎಂದು ಹೇಳಿದರು.

ದೇಶದಲ್ಲಿನ ಕೆಲವು ದೃಶ್ಯ ಮಾಧ್ಯಮಗಳು ಸರಕಾರ ಹಾಗೂ ಪ್ರಧಾನಿ ಮೋದಿಗೆ ಹೆಚ್ಚಿನ ಆದ್ಯತೆ ನೀಡುತ್ತಿವೆ. ಸಂಪೂರ್ಣ ಸ್ವಾತಂತ್ರವಿಲ್ಲದಿದ್ದರೂ, ನಿಯಂತ್ರಣ ಮಾಡುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಮಾಧ್ಯಮವೂ ಬಂಡವಾಳಶಾಹಿಗಳ ಹಿಡಿತದಲ್ಲಿರುವುದು ವಾಸ್ತವ ಎಂದರು.

ಕೇಂದ್ರದಲ್ಲಿ ಯುಪಿಎ-1 ಹಾಗೂ ಯುಪಿಎ-2 ರ ಅವಧಿಯಲ್ಲಿ ಹಲವಾರು ಜನಪರ ಕಾರ್ಯಕ್ರಮಗಳು ಜಾರಿಯಾಗಿದ್ದು, ಮಾಧ್ಯಮಗಳು ಅದನ್ನು ಎತ್ತಿ ಹಿಡಿದಿವೆ. ಮಾಧ್ಯಮದಲ್ಲಿ ಕೆಟ್ಟದ್ದು ಇರುತ್ತದೆ, ಒಳ್ಳೆಯದು ಇರುತ್ತದೆ ಎಂದ ಅವರು, ಚಿದಂಬರಂ ಗೃಹ ಸಚಿವರಾದ ವೇಳೆ ಅಮಿತ್ ಶಾರನ್ನು ಜೈಲಿಗೆ ಕಳಿಸಿದರು. ಇದೀಗ ಅಮಿತ್ ಶಾ ಚಿದಂಬರಂರನ್ನು ಕಳುಹಿಸುತ್ತಿದ್ದಾರೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕವಿ ಕೆ.ವೈ.ನಾರಾಯಣಸ್ವಾಮಿ, ಪತ್ರಕರ್ತ ಮಂಜುನಾಥ ಅದ್ದೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News