ಬಿಬಿಎಂಪಿ ವ್ಯಾಪ್ತಿಯ 4 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ವೇಳಾಪಟ್ಟಿ ಪ್ರಕಟ

Update: 2019-09-21 16:13 GMT

ಬೆಂಗಳೂರು, ಸೆ.21: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕೆ.ಆರ್.ಪುರಂ, ಮಹಾಲಕ್ಷ್ಮೀ ಲೇಔಟ್, ಯಶವಂತಪುರ ಹಾಗೂ ಶಿವಾಜಿನಗರ ವಿಧಾನ ಸಭಾಕ್ಷೇತ್ರದಲ್ಲಿ ತೆರವಾಗಿರುವ ವಿಧಾನ ಸಭಾ ಸದಸ್ಯರನ್ನು ಚುನಾಯಿಸಲು ಉಪಚುನಾವಣೆ ಪ್ರಕ್ರಿಯೆಯ ವೇಳಾ ಪಟ್ಟಿ ವಿವರಗಳನ್ನು ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ನೀಡಿದರು.

ಬಿಬಿಎಂಪಿಯ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲ್ಕು ವಿಧಾನ ಸಭಾ ಕ್ಷೇತ್ರಗಳಲ್ಲಿ ನಾಮಪತ್ರಗಳನ್ನು ಸೆ.30ರೊಳಗೆ ಸಲ್ಲಿಸಬೇಕು ಹಾಗೂ ಉಮೇದುವಾರಿಕೆಯನ್ನು ಅ.1ರೊಳಗೆ, ಮತದಾನವನ್ನು ಅ.21ರಂದು ನಡೆಸಲಾಗುತ್ತದೆ. ಮತಗಳ ಎಣಿಕೆಯನ್ನು ಅ.24ರ ಬೆಳಗ್ಗೆ 8ಗಂಟೆಯಿಂದ ನಡೆಸಲಾಗುತ್ತದೆ. ಇನ್ನು, ಚುನಾವಣೆ ಪ್ರಕ್ರಿಯೆ ಅ.27ರಂದು ಮುಕ್ತಾಯವಾಗಲಿದೆ ಎಂದು ಹೇಳಿದರು.

ಚುನಾವಣೆ ಸಂದರ್ಭದಲ್ಲಿ ಪ್ರತಿ ಮತಗಟ್ಟೆಗೆ ಒಬ್ಬ ಅಧ್ಯಕ್ಷಾಧಿಕಾರಿ ಮತ್ತು 3 ಮತಗಟ್ಟೆ ಅಧಿಕಾರಿಗಳನ್ನು ನೇಮಕ ಮಾಡಲಾಗುವುದು. ಅದರಂತೆ 1,361 ಮತಗಟ್ಟೆಗಳಿಗೆ ಶೇ.20ರಷ್ಟು ಹೆಚ್ಚುವರಿ ಚುನಾವಣಾ ಸಿಬ್ಬಂದಿಯನ್ನು ಒಳಗೊಂಡಂತೆ 6,532 ಚುನಾವಣಾ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳಲಾಗುವುದು. ಮೈಕ್ರೋ ಅಬ್ಸರ್‌ವರ್ಸ್‌ಗಳನ್ನು ಮತದಾನ ಪ್ರಕ್ರಿಯೆಗೆ ನಿಯೋಜಿಸಿಕೊಳ್ಳಲಾಗುವುದು. ಅಲ್ಲದೆ, ಚುನಾವಣಾ ಸಿಬ್ಬಂದಿ ಮತ್ತು ಮೈಕ್ರೋ ಅಬ್ಸರ್‌ವರ್ಸ್‌ಗಳಿಗೆ ಎರಡು ಹಂತದಲ್ಲಿ ತರಬೇತಿಯನ್ನು ನೀಡಲಾಗುವುದು ಎಂದು ವಿವರಿಸಿದರು.

ಉಚಿತ ಸಹಾಯವಾಣಿ:

ಚುನಾವಣಾ ಸಂಬಂಧಿಸಿದ ದೂರುಗಳನ್ನು ಹಾಗೂ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಪ್ರಶ್ನೆಗಳಿಗೆ ಉತ್ತರಗಳನ್ನು ನಾಗರಿಕರು ಉಚಿತ ಸಹಾಯವಾಣಿ 1950 ನ್ನು ಸಂಪರ್ಕಿಸಿ ಪಡೆಯಬಹುದು.

ಮಾದರಿ ನೀತಿ ಸಂಹಿತೆ ಅನುಸಾರ ಮತದಾರರನ್ನು ಸೆಳೆಯುವ ಅಥವಾ ಪ್ರಭಾವ ಬೀರುವಂತಹ ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳದಂತೆ ತೀಕ್ಷ್ಣ ನಿಗಾ ವಹಿಸಲಾಗುವುದು.

-ಬಿ.ಎಚ್.ಅನಿಲ್ ಕುಮಾರ್, ಬಿಬಿಎಂಪಿ ಆಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News