ನ್ಯಾಷನಲ್ ಲಾ ಸ್ಕೂಲ್ ಉಪಕುಲಪತಿಯಾಗಿ ಸುಧೀರ್‌ ಕೃಷ್ಣಸ್ವಾಮಿ ನೇಮಿಸಲು ಎಸ್‌ಐಓ ಆಗ್ರಹ

Update: 2019-09-21 16:17 GMT

ಬೆಂಗಳೂರು, ಸೆ.21: ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ವಿಶ್ವವಿದ್ಯಾಲಯಕ್ಕೆ ಉನ್ನತ ಆಯ್ಕೆ ಸಮಿತಿಯ ನಿರ್ಧಾರದಂತೆ ಶೀಘ್ರವಾಗಿ ಸುಧೀರ್ ಕೃಷ್ಣಸ್ವಾಮಿ ಅವರನ್ನು ಉಪ ಕುಲಪತಿಯಾಗಿ ನೇಮಿಸಲಿ ಎಸ್‌ಐಓ ವಿದ್ಯಾರ್ಥಿ ಸಂಘಟನೆ ಆಗ್ರಹಿಸಿದೆ.

ನ್ಯಾಷನಲ್ ಲಾಸ್ಕೂಲ್ ಆಫ್ ಇಂಡಿಯಾ ವಿಶ್ವವಿದ್ಯಾಲಯಕ್ಕೆ ಈಗಾಗಲೇ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನೊಳಗೊಂಡ ಉನ್ನತ ಆಯ್ಕೆ ಸಮಿತಿಯ ಶಿಫಾರಸ್ಸಿನ ಮೇರೆಗೆ ಪ್ರೊ.ಸುಧೀರ್ ಕೃಷ್ಣಸ್ವಾಮಿಯವರನ್ನು ಉಪ ಕುಲಪತಿಯನ್ನಾಗಿ ನೇಮಿಸುವುದರ ಬಗ್ಗೆ ನಿರ್ಧರಿಸಲಾಗಿತ್ತು. ಇದೀಗ ಹೊಸ ಬೆಳವಣಿಗೆಯಲ್ಲಿ ಅವರ ನೇಮಕಾತಿ ವಿಳಂಬತೆಯ ಹಿಂದೆ ರಾಜಕೀಯ ನಡೆಯುತ್ತಿರುವುದು ಕಂಡು ಬಂದಿದೆ.

ಆ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಆಯ್ಕೆ ಸಮಿತಿಯ ನಿರ್ಧಾರದಂತೆ ಪ್ರೊ.ಸುಧೀರ್ ಕೃಷ್ಣಸ್ವಾಮಿಯವರನ್ನು ಉಪಕುಲಪತಿಯಾಗಿ ನೇಮಿಸುವಂತೆ ಒತ್ತಾಯಿಸಿ ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ಇದೀಗ ಆಯ್ಕೆ ಸಮಿತಿಯಲ್ಲಿದ್ದ ವಿಶೇಷ ಆಮಂತ್ರಿತ ಸರ್ವೋಚ್ಚ ನ್ಯಾಯಾಲಯದ ಮೂವರು ನ್ಯಾಯಾಧೀಶರನ್ನು ಹೊರತುಪಡಿಸಿ ಸೆ.28ರಂದು ಸಭೆ ನಡೆಸಿ ಮತ್ತೊಂದು ನಿರ್ಧಾರ ಕೈಗೊಳ್ಳುವ ಸಾಧ್ಯತೆಯ ಬಗ್ಗೆ ತಿಳಿದು ಬಂದಿದೆ. ಈ ನಿರ್ಧಾರವು ರಾಜಕೀಯ ಪ್ರೇರಿತದಂತೆ ಕಂಡು ಬಂದಿದ್ದು, ಕೂಡಲೇ ವಿಶ್ವವಿದ್ಯಾಲಯದ ಮತ್ತು ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಉನ್ನತ ಆಯ್ಕೆ ಸಮಿತಿಯ ಶಿಫಾರಸ್ಸಿನಂತೆ ಪ್ರೊ.ಸುಧೀರ್ ಕೃಷ್ಣಸ್ವಾಮಿಯನ್ನು ಉಪ ಕುಲಪತಿಯಾಗಿ ನೇಮಿಸುವಂತೆ ಎಸ್‌ಐಓ ಪತ್ರಿಕಾ ಪ್ರಕಟನೆ ಮೂಲಕ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News