ಮಠಗಳಲ್ಲಿ ಸಂವಿಧಾನ ಕುರಿತು ಪ್ರವಚನಗಳು ನಡೆಯಲಿ: ಬಸವನಾಗಿದೇವ ಸ್ವಾಮೀಜಿ

Update: 2019-09-21 16:23 GMT

ಬೆಂಗಳೂರು, ಸೆ.21: ಮಠಗಳಲ್ಲಿ ಕೇವಲ ಚಾತುರ್ಮಾಸ ವ್ರತ ಸೇರಿದಂತೆ ಹೊಸ ಚಿಂತನೆಗಳ ಹುಟ್ಟಿಗೆ ಏನೇನೂ ಸಹಕಾರಿಯಲ್ಲದ ಪ್ರವಚನಗಳಿಗಿಂತ ನಮ್ಮೆಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಸಂವಿಧಾನದ ಕುರಿತ ಪ್ರವಚನಗಳನ್ನು ನಡೆಸುವ ನಿಟ್ಟಿನಲ್ಲಿ ಇತರೆ ಸಮುದಾಯದ ಮಠಾಧೀಶರೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಚಲವಾದಿ ಗುರುಪೀಠದ ಬಸವನಾಗಿದೇವ ಸ್ವಾಮೀಜಿ ತಿಳಿಸಿದ್ದಾರೆ.

ಶನಿವಾರ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ನಗರದ ಕೃಷಿ ತಂತ್ರಜ್ಞಾನ ಸಂಸ್ಥೆಯ ಭವನದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನಾಚರಣೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಭಾರತ ವಿಶ್ವಗುರುವಾಗುವತ್ತ ಸಾಗುತ್ತಿದೆ ಎಂದು ಹೇಳುತ್ತಿರುತ್ತಾರೆ. ಆದರೆ, ಅದು ತನ್ನಷ್ಟಕ್ಕೆ ತಾನೇ ಆಗುವುದಿಲ್ಲ. ದೇಶದ ಜನತೆ ವೈಜ್ಞಾನಿಕ ಚಿಂತನೆಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಅದು ಸಾಧ್ಯ. ಹೀಗಾಗಿ ವೈಜ್ಞಾನಿಕ ಚಿಂತನೆಗಳಿಂದ ಕೂಡಿರುವ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ತಿಳಿಯುವಂತಹ ಕೆಲಸವನ್ನು ಮಠಗಳಲ್ಲಿ ಅಗತ್ಯವಾಗಿ ಮಾಡಬೇಕಾಗಿದೆ ಎಂದು ಅವರು ಹೇಳಿದರು.

ಜನತೆಯಲ್ಲಿರುವ ನಿಜವಾದ ಸಾಮರ್ಥ್ಯವನ್ನು ಕೇವಲ ದೇವರು, ಧರ್ಮ ಆಚರಣೆಯಲ್ಲಿಯೇ ವ್ಯರ್ಥ ಮಾಡುತ್ತಿದ್ದೇವೆ. ಅವೈಜ್ಞಾನಿಕ, ಮೂಢಾಚರಣೆಗಳಲ್ಲಿಯೇ ದೇಶದ ಮಾನವ ಸಂಪನ್ಮೂಲ ಕಳೆದು ಹೋಗುತ್ತಿದೆ. ಇದರಿಂದ ಹೊಸ ಚಿಂತನೆಗಳು ಮೂಡುವುದಾದರು ಹೇಗೆ ಸಾಧ್ಯ. ಹೀಗಾಗಿ ನಾವು ಅಂಬೇಡ್ಕರ್ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಸಾಗಿದರೆ ಮಾತ್ರ ದೇಶ ವಿಶ್ವಗುರುವಾಗುವತ್ತ ಸಾಗಲು ಸಾಧ್ಯವೆಂದು ಅವರು ಹೇಳಿದರು.

ಅಬಕಾರಿ ಸಚಿವ ಎಚ್.ನಾಗೇಶ್ ಮಾತನಾಡಿ, ದಲಿತ ಸಮುದಾಯದ ಯುವ ಜನತೆ ಡಾ.ಬಿ.ಆರ್.ಅಂಬೇಡ್ಕರ್ ಚಿಂತನೆಯ ಮಾರ್ಗದಲ್ಲಿ ಸಾಗಿದಾಗ ಮಾತ್ರ ಅಭಿವೃದ್ಧಿಯಡೆ ಸಾಗಲು ಸಾಧ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣದೆಡೆಗೆ ಹೆಚ್ಚಿನ ಗಮನ ಕೊಡಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಹಣಕಾಸು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಶಿವಪ್ರಕಾಶ್, ಚಂದ್ರಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಹೆಚ್ಚಿನ ಸಂಖ್ಯೆಯಲ್ಲಿ ಆಯೋಜಿಸಿ ಯುವಜನತೆಗೆ ಮಾರ್ಗದರ್ಶನ ನೀಡುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ. ಎನ್ನೆಸ್ಸೆಸ್ ನೇತೃತ್ವದಲ್ಲಿ ರಾಜ್ಯದ ಪ್ರತಿ ಕಾಲೇಜಿನಲ್ಲಿ ಭಾವೈಕ್ಯತೆ ಶಿಬಿರಗಳು ನಡೆಯಲಿ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News