ಸೆ.22ರಂದು ರಾಷ್ಟ್ರೀಯ ಏಕತಾ ಅಭಿಯಾನ

Update: 2019-09-21 16:59 GMT

ಬೆಂಗಳೂರು, ಸೆ.21: ರಾಷ್ಟ್ರೀಯ ಏಕತಾ ಅಭಿಯಾನ ಹಾಗೂ ಕಾಶ್ಮೀರ ವಿಶೇಷಾಧಿಕಾರ 370ನೇ ವಿಧಿ ರದ್ಧತಿ ಕುರಿತು ಜನ ಜಾಗರಣಾ ಸಭೆಯು ಇಂದು (ಸೆ.22) ನಗರದ ಅರಮನೆ ಮೈದಾನದಲ್ಲಿ ನಡೆಯಲಿದೆ.

ಈ ಕುರಿತು ಶನಿವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯ ಕಾರ್ಯದರ್ಶಿ ರವಿಕುಮಾರ್, ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಮುಖ್ಯ ಭಾಷಣ ಮಾಡಲಿದ್ದು, ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದರು.

ಕಾರ್ಯಕ್ರಮದ ಅಂಗವಾಗಿ ರವಿವಾರ ನಗರಕ್ಕೆ ಭೇಟಿ ನೀಡಲಿರುವ ಜೆ.ಪಿ.ನಡ್ಡಾ ಅವರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಹಾಗೂ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರ ಮನೆಗೆ ಭೇಟಿ ನೀಡಿ ಕಾಶ್ಮೀರ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಭಿಪ್ರಾಯ ಹಾಗೂ ಸಲಹೆಗಳನ್ನು ಪಡೆದುಕೊಳ್ಳಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಅದೇ ರೀತಿ, ಲಾಲ್‌ಬಾಗ್ ಪಶ್ಚಿಮ ದ್ವಾರದಲ್ಲಿ ನಿರ್ಮಿಸಿರುವ ಕೇಂದ್ರ ಮಾಜಿ ಸಚಿವ ದಿ. ಅನಂತ್‌ಕುಮಾರ್ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ನಡ್ಡಾ ಪಾಲ್ಗೊಳ್ಳಲಿದ್ದಾರೆ ಎಂದ ಅವರು, ಮಹಾತ್ಮಗಾಂಧೀಜಿ 150ನೇ ಜಯಂತಿಯನ್ನು ವಿಶೇಷ ಹಾಗೂ ಅರ್ಥಪೂರ್ಣ ಆಚರಣೆಗೆ ಬಿಜೆಪಿ ಕ್ರಮ ಕೈಗೊಳ್ಳಲಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೊಂದಿಗೆ ವಿಡಿಯೊ ಸಂವಾದ ನಡೆಸಲಾಗುವುದು ಎಂದರು.

ಈ ವೇಳೆ ಬಿಜೆಪಿ ರಾಜ್ಯ ಖಜಾಂಚಿ ಸುಬ್ಬಾನರಸಿಂಹ, ಸಹ ವಕ್ತಾರ ಪ್ರಕಾಶ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News