ಇಂದು ಭಾರತ-ಆಫ್ರಿಕಾ ಅಂತಿಮ ಟ್ವೆಂಟಿ-20 ಪಂದ್ಯ

Update: 2019-09-22 05:05 GMT

ಬೆಂಗಳೂರು, ಸೆ.21: ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಮೂರನೇ ಹಾಗೂ ಅಂತಿಮ ಟ್ವೆಂಟಿ-20 ಪಂದ್ಯ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರವಿವಾರ ನಡೆಯಲಿದೆ.

 ಮೊದಲ ಪಂದ್ಯ ಧರ್ಮಶಾಲಾದಲ್ಲಿ ಮಳೆಯಿಂದಾಗಿ ರದ್ಧಾಗಿತ್ತು. ಮೊಹಾಲಿಯಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಭಾರತ 7 ವಿಕೆಟ್‌ಗಳ ಜಯ ಗಳಿಸಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತ್ತು. ಭಾರತದ ಬೌಲರ್‌ಗಳು ಚೆನ್ನಾಗಿ ಆಡಿದ್ದರು. ನಾಯಕ ವಿರಾಟ್ ಕೊಹ್ಲಿ ಆಕರ್ಷಕ 72 ರನ್ ಮತ್ತು ಶಿಖರ್ ಧವನ್ 40 ರನ್ ಸಿಡಿಸಿದ್ದರು. ಇದೇ ಪ್ರದರ್ಶನವನ್ನು ಟೀಮ್ ಇಂಡಿಯಾ ಮುಂದುವರಿಸುವ ಹಾದಿಯಲ್ಲಿದೆ.

 ದಕ್ಷಿಣ ಆಫ್ರಿಕಾ ತಂಡ ಕಳೆದ ಪಂದ್ಯದಲ್ಲಿ ದೊಡ್ಡ ಮೊತ್ತದ ಸವಾಲನ್ನು ಸಂಪಾದಿಸುವಲ್ಲಿ ವಿಫಲವಾಗಿತ್ತು. ಆದರೂ ನಾಯಕ ಕ್ವಿಂಟನ್ ಡಿ ಕಾಕ್ ಕಳೆದ ಪಂದ್ಯದಲ್ಲಿ 52 ರನ್ ಮತ್ತು ಟೆಂಬಾ ಬವುಮಾ 49 ರನ್ ಗಳಿಸಿದ್ದರು. ಬೌಲರ್‌ಗಳು ಮೊದಲ ವಿಕೆಟ್‌ನ್ನು ಬೇಗನೆ ಕಬಳಿಸಿದರೂ ಬಳಿಕ ಪರಿಣಾಮ ಬೀರಲಿಲ್ಲ.

ಭಾರತದ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗ ಬಲಿಷ್ಠವಾಗಿದೆ. ಆದರೆ ವಿಕೆಟ್ ಕೀಪರ್ ರಿಷಭ್ ಪಂತ್ ಫಾರ್ಮ್ ತಂಡಕ್ಕೆ ತಲೆನೋವು ತಂದಿದೆ. ಅವರು ಬ್ಯಾಟಿಂಗ್‌ನಲ್ಲಿ ಮಿಂಚುತ್ತಿಲ್ಲ. ಕಳೆದ ಪಂದ್ಯದಲ್ಲಿ 4 ರನ್ ಗಳಿಸಿ ಔಟಾಗಿದ್ದರು. ಈ ಕಾರಣದಿಂದಾಗಿ ಅವರಿಗೆ ಇನ್ನೊಂದು ಅವಕಾಶ ನೀಡುವ ಸಾಧ್ಯತೆ ಇದೆ.

 21ರ ಹರೆಯದ ಪಂತ್‌ಗೆ ಮಾಜಿ ನಾಯಕರಿಂದ ಬೆಂಬಲ ವ್ಯಕ್ತವಾಗಿದೆ. ಮಾಜಿ ನಾಯಕ ಮಹೇಂದ್ರ ಸಿಂಗ್‌ಧೋನಿ ಅನುಪಸ್ಥಿತಿಯಲ್ಲಿ ಪಂತ್‌ಗೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಅವಕಾಶ ನೀಡಲಾಗಿದ್ದರೂ, ಅವರಿಂದ ಸ್ಥಾನ ಭದ್ರಪಡಿಸುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಆದರೆ ಕೇವಲ ಎರಡು ಪಂದ್ಯಗಳಲ್ಲಿ ಅವರ ಸಾಮರ್ಥ್ಯವನ್ನು ನಿರ್ಧರಿಸುವುದು ಕಷ್ಟ ಎನ್ನುವುದು ಆಯ್ಕೆಗಾರರಿಗೂ ಗೊತ್ತಿದೆ.

 ಮೊಹಾಲಿಯ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ನಡೆದ 2ನೇ ಪಂದ್ಯದಲ್ಲಿ ನಾಯಕ ಕೊಹ್ಲಿ ಚೆನ್ನಾಗಿ ಬ್ಯಾಟಿಂಗ್ ಮಾಡಿದ್ದರು. ಅಂತಿಮ ಪಂದ್ಯ ನಡೆಯಲಿರುವ ಬೆಂಗಳೂರು ಅವರಿಗೆ ಫೇವರಿಟ್ ಕ್ರೀಡಾಂಗಣ. ಯಾಕೆಂದರೆ ಅವರು ನಾಯಕರಾಗಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ಅನೇಕ ಪಂದ್ಯಗಳನ್ನು ಆಡಿದ್ದಾರೆ. ಈ ಕಾರಣದಿಂದಾಗಿ ಅವರ ಬ್ಯಾಟಿಂಗ್ ಮುಂದಿನ ಪಂದ್ಯದಲ್ಲೂ ಅದೇ ರೀತಿ ಮುಂದುವರಿಯುವ ಸಾಧ್ಯತೆ ಇದೆ.

ಕೊಹ್ಲಿ, ಉಪನಾಯಕ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಅವರು ವೇಗಿ ಕಾಗಿಸೊ ರಬಾಡ ದಾಳಿಯನ್ನು ಈ ಪಂದ್ಯದಲ್ಲಿ ಸಮರ್ಥವಾಗಿ ಎದುರಿಸುವುದನ್ನು ನಿರೀಕ್ಷಿಸಲಾಗಿದೆ. ತಂಡದಲ್ಲಿ ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ ಅವರಂತಹ ಪ್ರತಿಭಾವಂತ ಆಟಗಾರರಿದ್ದಾರೆ.

  ವೇಗಿಗಳಾದ ಜಸ್‌ಪ್ರೀತ್ ಬುಮ್ರಾ ಮತ್ತು ಭುವನೇಶ್ವರ ಕುಮಾರ್ ಅನುಪಸ್ಥಿತಿಯಲ್ಲಿ ದೀಪಕ್ ಚಹಾರ್ ಮತ್ತು ನವದೀಪ ಸೈನಿ ತಮ್ಮ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸುವ ಕಡೆಗೆ ಗಮನ ಹರಿಸಿದ್ದಾರೆ. ವಾಷಿಂಗ್ಟನ್ ಸುಂದರ್, ಚಹಾರ್ ಮತ್ತು ಸೈನಿ ಅವರು ಆಫ್ರಿಕಾದ ಬ್ಯಾಟ್ಸ್‌ಮನ್‌ಗಳಿಗೆ ಸವಾಲಾಗಿದ್ದಾರೆ. ಆಫ್ರಿಕಾದ ಹೊಸ ನಾಯಕ ಕ್ವಿಂಟನ್ ಡಿ ಕಾಕ್ ಮೇಲೆ ಹೆಚ್ಚಿನ ಹೊರೆ ಬಿದ್ದಿದೆ. ಅವರಿಗೆ ಬ್ಯಾಟಿಂಗ್‌ನಲ್ಲಿ ಡೇವಿಡ್ ಮಿಲ್ಲರ್ ಮತ್ತು ರೇಝಾ ಹೆನ್ರಿಕ್ಸ್ ಬೆಂಬಲ ದೊರೆಯುವುದನ್ನು ನಿರೀಕ್ಷಿಸಲಾಗಿದೆ. ಕಳೆದ ಪಂದ್ಯದಲ್ಲಿ ಮಿಲ್ಲರ್ ಅರ್ಧಶತಕ ದಾಖಲಿಸಿದ್ದರು. ಟೆಂಬಾ ಬವುಮಾ 1 ರನ್ ಅಂತರದಲ್ಲಿ ಅರ್ಧಶತಕ ವಂಚಿತಗೊಂಡಿದ್ದರು.

ಪಂದ್ಯದ ಸಮಯ: ರಾತ್ರಿ 7:00 ಗಂಟೆಗೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News