ಡಾ. ಅಂಬೇಡ್ಕರ್ ಕುರಿತಂತೆ ಲಾರ್ಡ್ ಮೌಂಟ್ ಬ್ಯಾಟನ್

Update: 2019-09-22 11:29 GMT

1943ರಲ್ಲಿ ನನ್ನನ್ನು ಆಗ್ನೇಯ ಏಶ್ಯದ ಕಮಾಂಡರ್ ಆಗಿ ನೇಮಿಸಿ ದಿಲ್ಲಿಯಲ್ಲಿ ಮುಖ್ಯಕಚೇರಿಯನ್ನು ಸ್ಥಾಪಿಸಿದ ನಂತರ ಡಾ. ಅಂಬೇಡ್ಕರ್ ಅವರ ಬಗ್ಗೆ ನನಗೆ ಆಸಕ್ತಿ ಬೆಳೆಯಿತು. ಅವರು ಆ ಸಮಯದಲ್ಲಿ ವೈಸ್‌ರಾಯ್‌ಯವರ ಮಂಡಳಿಯ ಸದಸ್ಯರಾಗಿದ್ದರು ಮತ್ತು ಸ್ವಾತಂತ್ರ, ಸಮಾನತೆ ಮತ್ತು ಬದುಕುವ ನ್ಯಾಯಬದ್ಧ ಸ್ಥಿತಿಗಾಗಿ ಹೋರಾಟ ನಡೆಸುತ್ತಿದ್ದರು. ನಾಝಿಗಳು ಮತ್ತು ಮತಾಂಧರು ಯುದ್ಧದಲ್ಲಿ ಗೆದ್ದರೆ ತಾನು ಹೋರಾಟ ನಡೆಸುತ್ತಿರುವ ವಿಷಯಗಳನ್ನು ಎಂದೂ ಸಾಧಿಸಲು ಸಾಧ್ಯವಿಲ್ಲ ಎನ್ನುವುದು ಅಂಬೇಡ್ಕರ್ ಅವರಿಗೆ ಸ್ಪಷ್ಟವಾಗಿ ತಿಳಿದಿತ್ತು. ಅವರು ಮತ್ತು ಭಾರತೀಯ ಲೇಬರ್ ಪಕ್ಷ ಯುದ್ಧಾಪರಾಧಗಳ ತನಿಖೆಗೆ ಸಂಪೂರ್ಣ ವಾಗಿ ಸಹಕರಿಸಿದ್ದರು.

ಅನೇಕ ಭಾರತೀಯ ನಾಯಕರು ಯುದ್ಧವನ್ನೇ ವಿರೋಧಿಸುತ್ತಿದ್ದ ಸಮಯದಲ್ಲಿ ಅಂಬೇಡ್ಕರ್ ಯುದ್ಧವನ್ನು ಬೆಂಬಲಿಸಿರುವುದು ಅವರ ಬಗ್ಗೆ ನನಗೆ ಮತ್ತಷ್ಟು ಕುತೂಹಲ ಮೂಡುವಂತೆ ಮಾಡಿತ್ತು. ಭಾರತ ನನ್ನ ಕಾರ್ಯಾಚರಣಾ ಸ್ಥಾನವಾಗಿದ್ದರಿಂದ ಲಕ್ಷಾಂತರ ಭಾರತೀಯ ಸೈನಿಕರು, ನಾವಿಕರು ಮತ್ತು ವಾಯುಪಡೆ ನನ್ನ ಸೂಚನೆಯಂತೆ ಬರ್ಮಾದಲ್ಲಿ ಯುದ್ಧದಲ್ಲಿ ಭಾಗಿಯಾಗಿದ್ದರು. 1947ರಲ್ಲಿ ನಾನು ಭಾರತದ ಅಂತಿಮ ವೈಸ್‌ರಾಯ್ ಆದಾಗ ಅಂಬೇಡ್ಕರ್ ಜೊತೆ ಅತ್ಯಂತ ಆಸಕ್ತಿದಾಯಕ ಮತ್ತು ವೌಲ್ಯಯುತ ಮಾತುಕತೆಗಳನ್ನು ನಡೆಸಿದ್ದೆ ಮತ್ತು ಅವರನ್ನು ಸ್ವತಂತ್ರ ಭಾರತದ ಮೊದಲ ಕಾನೂನು ಸಚಿವರಾಗಿ ನೇಮಿಸುವ ಪ್ರಧಾನಿ ಜವಾಹರ ಲಾಲ್ ನೆಹರೂ ಅವರ ಪ್ರಸ್ತಾವವನ್ನು ಪ್ರಬಲವಾಗಿ ಬೆಂಬಲಿಸಿದ್ದೆ.

ಅಂಬೇಡ್ಕರ್ ಅವರನ್ನು ಸಂವಿಧಾನ ರಚಿಸುವ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಕ ಮಾಡಿದ್ದರಿಂದಲೂ ನನಗೆ ಸಂತೋಷವಾಗಿತ್ತು. ವಿಧಾನಸಭೆಯಲ್ಲಿ ಅವರು ಭಾರತದ ನೂತನ ಸಂವಿಧಾನವನ್ನು ಮೊದಲ ಬಾರಿಗೆ ಪ್ರಸ್ತುತ ಪಡಿಸಿದ ರೀತಿಯನ್ನೂ ನಾನು ಆದರದ ಕಣ್ಣುಗಳಿಂದ ಗಮನಿಸುತ್ತಿದ್ದೆ. ಅದೊಂದು ಅಭೂತಪೂರ್ವ ಸಾಧನೆ.

ಆದರೆ ಅಸ್ಪಶ್ಯರೆನಿಸಿದ್ದ ಪರಿಶಿಷ್ಟ ಜಾತಿಗಳ ಪರ ಅವರ ಹೋರಾಟ ನನ್ನ ಮನಸ್ಸಿನಲ್ಲಿ ಗಟ್ಟಿಯಾಗಿ ಬೇರೂರಿದೆ. ಅಧಿಕಾರದ ಹಸ್ತಾಂತರದ ಸಮಯದಲ್ಲಿ ಭಾರತದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಆರು ಕೋಟಿ ಜನರಿದ್ದರು, ಅಂದರೆ ಬ್ರಿಟನ್ನ ಒಟ್ಟು ಜನಸಂಖ್ಯೆಗಿಂತಲೂ ಹೆಚ್ಚು.

ಬಾಬಾ ಸಾಹೇಬ್ ಎಂದು ಜನರಿಂದ ಪ್ರೀತಿಯಿಂದ ಕರೆಸಿಕೊಳ್ಳುವ ಅಂಬೇಡ್ಕರ್ ಅವರು ತನ್ನ ಜೀವನದಲ್ಲೂ ಅಸ್ಪಶ್ಯತೆಯ ಕಹಿಯನ್ನು ಅನುಭವಿಸಿದ್ದರು. ಅವುಗಳ ವಿರುದ್ಧ ದೃಢವಾಗಿ ನಿಂತು ಗೆದ್ದರು. ತಮ್ಮನ್ನು ಕಾಂಗ್ರೆಸ್‌ಗೆ ಸೀಮಿತಗೊಳಿಸುತ್ತದೆ ಎಂಬ ಕಾರಣಕ್ಕೆ, ಪೂನಾ ಒಪ್ಪಂದದ ಮೂಲಕ ವಿಧಾನಸಭೆಯಲ್ಲಿ ಪರಿಶಿಷ್ಟ ಜಾತಿಗೆ ಪ್ರತಿನಿಧಿತ್ವ ನೀಡುವ ಗಾಂಧೀಜಿಯವರು ನೀಡಿದ ಪರಿಹಾರ ಸಲಹೆಯ ಬಗ್ಗೆ ಅಂಬೇಡ್ಕರ್ ತೀವ್ರ ಅಸಮ್ಮತಿ ಹೊಂದಿದ್ದರು. ಅವರಿಗೆ ಆ ಧೈರ್ಯವಿತ್ತು. ಒಟ್ಟಾರೆಯಾಗಿ, ಭಾರತದ ಇತಿಹಾಸದಲ್ಲಿ ಶಾಶ್ವತ ಸ್ಥಾನಗಳಿಸಿರುವ ಈ ಸ್ಪಷ್ಟ ದೃಷ್ಟಿಕೋನದ ಧೀಮಂತ ಹೋರಾಟಗಾರನನ್ನು ಅರಿಯುವ ಅವಕಾಶ ಸಿಕ್ಕಿದ್ದು ಒಂದು ಅದ್ಭುತ ಅನುಭವವಾಗಿತ್ತು.

-ಲಾರ್ಡ್ ವೌಂಟ್ ಬ್ಯಾಟನ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News