ಹಿಂದಿ ಭಾಷೆ ಹೇರಿಕೆಯಿಂದ ಶಾಲೆ ಬಿಡುವ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳ: ಪ್ರೊ.ಎಸ್.ಜಿ.ಸಿದ್ದರಾಮಯ್ಯ

Update: 2019-09-22 15:08 GMT

ಬೆಂಗಳೂರು, ಸೆ.22: ಸಂಸ್ಕೃತ ಭಾಷೆ, ಹಿಂದಿ ಹಾಗೂ ಇಂಗ್ಲಿಷ್ ಭಾಷೆ ಹೇರಿಕೆ ಹೀಗೆಯೇ ನಿರಂತರವಾಗಿ ನಡೆದರೆ, ಐದಾರು ವರ್ಷದಲ್ಲಿ ಹೆಚ್ಚಿನ ಸಂಖ್ಯೆಯ ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಾರೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ಕ್ವೀನ್ಸ್ ರಸ್ತೆಯ ಕೃಷಿ ತಾಂತ್ರಿಕ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಿದ್ದ ನಾಡಿನ ಸಾಹಿತಿಗಳು, ರಂಗಕರ್ಮಿಗಳು ಹಾಗೂ ಹೋರಾಟಗಾರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಜೆಡಿಎಸ್-ಕಾಂಗ್ರೆಸ್ ನೇತೃತ್ವದ ಸರಕಾರ ರಾಜ್ಯದಲ್ಲಿ ಒಂದು ಸಾವಿರ ಇಂಗ್ಲಿಷ್ ಶಾಲೆಗಳನ್ನು ತೆರೆಯಲಾಗುವುದು ಎಂದು ಘೋಷಿಸಿದರೆ, ಕೇಂದ್ರ ಸರಕಾರ ಹಿಂದಿ ಭಾಷೆಯನ್ನು ವಿರೋಧಿಸುವವರನ್ನು ದೇಶ ವಿರೋಧಿಗಳೆಂದು ಬಿಂಬಿಸುತ್ತಲೇ ರಾಜ್ಯ ಭಾಷೆಗಳು ನಶಿಸಿ ಹೋಗಲು ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದ್ದಾರೆ. ಇಂತಹ ವಿರೋಧಾಭ್ಯಾಸದ ಸಂಗತಿಗಳು ಹೀಗೆಯೇ ಮುಂದುವರೆದರೆ, ಹೆಚ್ಚಿನ ಸಂಖ್ಯೆಯ ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಾರೆ ಎಂದು ಅಭಿಪ್ರಾಯಪಟ್ಟರು.

ಇಂಗ್ಲಿಷ್ ಒಂದು ಭಾಷೆಯಾಗಿ, ಕನ್ನಡ ಕಡ್ಡಾಯ ಮಾಧ್ಯಮವಾಗಿ ಜನರ ಮನಸ್ಸೊಳಗೆ ತಳವೂರಿತ್ತು. ಆದರೆ, 2014ರ ನಂತರ ದೇಶದಲ್ಲಿ ಒಂದೆ ಭಾಷೆ(ಹಿಂದಿ), ಒಂದೆ ತೆರಿಗೆ ಸೇರಿ ಇನ್ನಿತರ ವಿಚಾರಗಳನ್ನು ಜನರ ಮೇಲೆ ಒತ್ತಾಯಪೂರ್ವಕವಾಗಿ ಹೇರುತ್ತಿದ್ದಾರೆ. ಅದರ ಜೊತೆಗೆ ಸಂಸ್ಕೃತವನ್ನು ಮೊದಲ ಭಾಷೆಯನ್ನಾಗಿ ಹೇರಲು ಎಲ್ಲ ಪ್ರಯತ್ನಗಳು ನಡೆಯುತ್ತಿವೆ ಎಂದು ಕಿಡಿಕಾರಿದರು.

ಭಾಷಾವಾರು ಪ್ರಾಂತ್ಯಗಳು ರಚನೆಯಾದ ಬಳಿಕ ತಮ್ಮ ತಮ್ಮ ರಾಜ್ಯಗಳಲ್ಲಿ ತಮ್ಮ ಭಾಷೆಗಳಿಗೆ ಪ್ರಾಧ್ಯಾನತೆ ನೀಡುವುದು ಕಡ್ಡಾಯವಾಯಿತು. ಸಂವಿಧಾನದಲ್ಲೂ ಈ ಭಾಷೆಗಳನ್ನು ಉಲ್ಲೇಖಿಸಲಾಯಿತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಬಹು ಸಂಸ್ಕೃತಿಗೆ ಕಡಿವಾಣ ಹಾಕಿ ಏಕಸಂಸ್ಕೃತಿಗೆ ಹೆಚ್ಚಿನ ಮನ್ನಣೆ ನೀಡಲಾಗುತ್ತಿದೆ ಎಂದು ತಿಳಿಸಿದರು. ರಾಜ್ಯ ಅಥವಾ ದೇಶದಲ್ಲಿ ಯಾವುದೇ ಪಕ್ಷವಿರಲಿ ನಮ್ಮ ಆಲೋಚನೆಗಳಿಗೆ(ಅಂದರೆ ಬಹುತ್ವ ಸಂಸ್ಕೃತಿ) ಶಕ್ತಿ ನೀಡುವ ಪಕ್ಷಗಳಿದ್ದರೆ ಅಂತಹ ಪಕ್ಷಗಳನ್ನು ಪ್ರೋತ್ಸಾಹಿಸೋಣ ಇಲ್ಲವೆಂದರೆ ಅಂತಹ ಪಕ್ಷಗಳು ತಿರಸ್ಕರಿಸೋಣ ಎಂದ ಅವರು, ಹಿಂದಿ ವಿರೋಧಿ ಚಳುವಳಿ ಗೋಕಾಕ್ ಚಳುವಳಿಯಂತೆ ಒಂದು ದೊಡ್ಡ ಶಕ್ತಿಯಾಗಿ ಹೊರಹೊಮ್ಮಬೇಕೆಂದು ಹೇಳಿದರು.

ಹಿರಿಯ ಸಾಹಿತಿ ಎಲ್.ಹನುಮಂತಯ್ಯ ಅವರು ಮಾತನಾಡಿ, ಇದು ಬಹುತ್ವ ದೇಶವಾಗಿದ್ದು, ಹಿಂದಿ ಹೇರಿಕೆಯನ್ನು ವಿರೋಧಿಸೋಣ ಎಂದು ಹೇಳಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮಾತನಾಡಿ, ಸರೋಜಿನಿ ಮಹಿಷಿ ವರದಿ ಕಾಯ್ದೆಯಾಗಿ ಪರಿವರ್ತನೆಯಾಗಬೇಕಾಗಿದೆ. ನವೆಂಬರ್ 1ಕ್ಕೆ ರಾಜ್ಯಕ್ಕೆ ಒಂದು ಕನ್ನಡ ಧ್ವಜಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್, ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಸಾಹಿತಿ ಬಿ.ಟಿ.ಲಲಿತಾ ನಾಯಕ್, ಮಂಜುನಾಥ್ ಅದ್ದೆ, ಸೂರ್ಯ ಮುಕುಂದರಾಜ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News