ಸರಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಲು ಕುಂಬಾರ ಸಮುದಾಯಕ್ಕೆ ಆನಂದ್ ಶೇಠ್ ಸಲಹೆ

Update: 2019-09-22 16:35 GMT

ಬೆಂಗಳೂರು, ಸೆ. 22: ಕುಂಬಾರ ಸಮುದಾಯದವರಿಗೆ ರಾಜ್ಯ ಸರಕಾರ ಕಲ್ಪಿಸಿರುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಮುಂಚೂಣಿಗೆ ಬರಬೇಕು ಎಂದು ಗೋವಾ ಮಾಜಿ ಉಪ ಸಭಾಪತಿ ಆನಂದ್ ಶೇಠ್ ಅವರು ಕರೆ ನೀಡಿದ್ದಾರೆ.

ರವಿವಾರ ನಗರದ ಶಿವಾನಂದ ವೃತ್ತದ ಬಳಿಯ ಗುರುರಾಜ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ರಾಜ್ಯ ಕುಂಬಾರ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಪದೋನ್ನತಿ ಪಡೆದ ಹಾಗೂ ನಿವೃತ್ತಿ ಹೊಂದಿದ ಸದಸ್ಯ ನೌಕರರಿಗೆ ಮತ್ತು ಸಾಧಕರಿಗೆ ಅಭಿನಂದನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ರಾಜ್ಯದಲ್ಲಿ ಅತ್ಯಂತ ಹಿಂದುಳಿದಿರುವ ಕುಂಬಾರ ಸಮುದಾಯ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಮುಂದೆ ಬರಬೇಕಿದೆ. ಆ ನಿಟ್ಟಿನಲ್ಲಿ ಸರಕಾರದ ಯೋಜನೆಗಳನ್ನು ಬಳಸಿಕೊಳ್ಳಬೇಕು ಎಂದು ಅವರು ಇದೇ ವೇಳೆ ಸಲಹೆ ಮಾಡಿದರು.

ಕಾರ್ಯಕ್ರಮದಲ್ಲಿ ಕೆಎಎಸ್ ಪ್ರೀಲಿಮ್ಸ್ ಪರೀಕ್ಷೆ ಮುಗಿಸಿದ 15 ಸಾಧಕರಿಗೆ ಮತ್ತು ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತೀಹೆಚ್ಚು ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಇದೇ ವೇಳೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರನ್ನು ಸನ್ಮಾನಿಸಲಾಯಿತು.

ಕುಂಬಾರ ಸರಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆರ್. ಶ್ರೀನಿವಾಸ್, ಕರ್ನಾಟಕ ಇಂಜಿನಿಯರಿಂಗ್ ಸೇವಾ ಸಂಘದ ಅಧ್ಯಕ್ಷ ಬಿ.ಪೀತಾಂಬರಸ್ವಾಮಿ, ಪದಾಧಿಕಾರಿಗಳಾದ ಗುರುರಾಜ್, ಶಿವಯ್ಯ, ನಾಗರಾಜ್, ಚಿಕ್ಕವೀರಯ್ಯ ಮತ್ತು ತಬಲ ನಾರಾಯಣಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News