ಸಿದ್ದರಾಮಯ್ಯರ ಯೋಜನೆಗಳನ್ನು ಜನರಿಗೆ ತಲುಪಿಸಲು ನಮ್ಮ ಬಳಿ ಕಾರ್ಯಕರ್ತರಿರಲಿಲ್ಲ: ಕೆ.ಆರ್.ರಮೇಶ್ ಕುಮಾರ್

Update: 2019-09-22 17:25 GMT

ಬೆಂಗಳೂರು, ಸೆ.22: ಸಿದ್ದರಾಮಯ್ಯ ಜಾರಿ ಮಾಡಿದ ಯೋಜನೆಗಳನ್ನು ಜನರಿಗೆ ಸಮರ್ಪಕವಾಗಿ ತಲುಪಿಸುವ ಕೆಲಸ ನಿರ್ವಹಿಸಲು ಕಾರ್ಯಕರ್ತರೇ ನಮ್ಮಲ್ಲಿ ಇರಲಿಲ್ಲ ಎಂದು ಮಾಜಿ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಹೇಳಿದ್ದಾರೆ.

ರವಿವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಜನಮನ ಪ್ರಕಾಶನದ ವತಿಯಿಂದ ಆಯೋಜಿಸಿದ್ದ ‘ಸಿದ್ದರಾಮಯ್ಯ ಆಡಳಿತ ಅಂತರಂಗ ಬಹಿರಂಗ, ವರ್ತಮಾನದ ಇತಿಹಾಸ’ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜಕೀಯ ಪಕ್ಷಗಳಿಗೆ ಕಾರ್ಯಕರ್ತರ ಅಗತ್ಯತೆ ತುಂಬಾ ಮಹತ್ವದ್ದಾಗಿದೆ. ಆದರೆ, ನಮ್ಮದು ಜನರ ಪಕ್ಷವಾಗಿದ್ದು, ಕಾರ್ಯಕರ್ತರೇ ಇಲ್ಲ. ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕಾರ್ಯಕರ್ತರನ್ನು ಬೆಳೆಸಿದ್ದರು. ಈಗ ಅಂತಹ ಪದ್ಧತಿ ಕಡಿಮೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎಡಪಕ್ಷಗಳಲ್ಲಿ ಹಾಗೂ ಬಲಪಂಥೀಯ ಪಕ್ಷಗಳಲ್ಲಿ ತಮ್ಮದೇ ಆದ ಸಿದ್ಧಾಂತವಿದೆ. ಆದರೆ, ಜೆಡಿಎಸ್-ಕಾಂಗ್ರೆಸ್ ಪಕ್ಷಗಳು ಎಡ-ಬಲ ಎರಡೂ ಅಲ್ಲ. ಎಲ್ಲರೂ ಪ್ರಗತಿಪರ ಚಿಂತನೆಯುಳ್ಳವರೇ ಇರುವುದಿಲ್ಲ ಎಂದ ಅವರು, ಪ್ರಗತಿಪರ ವಿಚಾರಗಳನ್ನು ನಮ್ಮೆಳಗೆಯೇ ವಿರೋಧ ಮಾಡುವವರಿದ್ದಾರೆ ಎಂದು ತಿಳಿಸಿದರು.

ಸಿದ್ದರಾಮಯ್ಯರನ್ನು ಅರಸುಗೆ ಹೋಲಿಕೆ ಮಾಡುತ್ತಾರೆ. ಆದರೆ, ಅವರಿಗೂ ಇವರಿಗೂ ಕೆಲವು ಸಾಮ್ಯತೆಯಿರಬಹುದು. ಅಷ್ಟಕ್ಕೆ ಹೋಲಿಕೆ ಸರಿಯಲ್ಲ ಎಂದ ಅವರು, ಅರಸು ಕಾಲದಲ್ಲಿನ ಉಳುವವನಿಗೆ ಭೂಮಿ ಕಾಯ್ದೆ ಜಾರಿಯ ಸಂದರ್ಭದಲ್ಲಿ ತಮ್ಮ ಸಂಪುಟದಲ್ಲಿಯೇ ವಿರೋಧ ಬಂದಿತ್ತು. ಅದೇ ರೀತಿ ಸಿದ್ದರಾಮಯ್ಯ ಕಾಲದಲ್ಲಿಯೂ ಅನೇಕ ವಿರೋಧಗಳ ನಡುವೆ ಕಾಯ್ದೆಗಳನ್ನು ಮಾಡಿದ್ದಾರೆ ಎಂದು ನುಡಿದರು.

ಮುಖ್ಯಮಂತ್ರಿಯಾದ ಮೊದಲ ದಿನವೇ ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆ ಘೋಷಿಸಿದರು. ಅಂದಿನ ಮಾಧ್ಯಮಗಳು ಇದರ ವಿರುದ್ಧ ಅಭಿಯಾನ ನಡೆಸಿದವು ಎಂದ ಅವರು, ಈ ಯೋಜನೆಯಿಂದ ಎಲ್ಲರೂ ಸೋಮಾರಿಗಳಾಗುತ್ತಾರೆ ಎಂದರು. ಹಣವೆಲ್ಲಾ ಇದಕ್ಕೆ ಖರ್ಚು ಮಾಡಿ, ಖಜಾನೆ ಖಾಲಿ ಮಾಡುತ್ತಾರೆಂದು ಮೂದಲಿಸಿದರು. ಆದರೆ, ಇದ್ಯಾವುದಕ್ಕೂ ಸಿದ್ದರಾಮಯ್ಯ ಕ್ಯಾರೆ ಎನ್ನಲಿಲ್ಲ ಎಂದು ರಮೇಶ್ ಕುಮಾರ್ ಹೇಳಿದರು.

ಇಂದಿನ ಮಾಧ್ಯಮಗಳು ಒಬ್ಬ ವ್ಯಕ್ತಿಯನ್ನು ವಿಜೃಂಭಿಸುತ್ತಿವೆ. ಆದರೆ, ರೂಪಾಯಿ ಮೌಲ್ಯ, ಆರ್ಥಿಕ ಕುಸಿತ, ಉದ್ಯೋಗ ನಷ್ಟ ಇದರ ಬಗ್ಗೆ ಆ ಮನುಷ್ಯ ಚಕಾರವೆತ್ತಲಿಲ್ಲ. ಇನ್ನು, ವಿದೇಶಗಳಲ್ಲಿರುವ ಕಪ್ಪುಹಣ ಎಲ್ಲ ಕಾಂಗ್ರೆಸ್‌ನವರದ್ದೇ ಎಂದು ಬಿಂಬಿಸಲಾಗುತ್ತಿದೆ ಎಂದು ರಮೇಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಿ ಮೋದಿ ಕಪ್ಪುಹಣ ಇಟ್ಟವರನ್ನು ಕರೆತಂದು ಜೈಲಿಗೆ ಹಾಕಲಿ. ಅದೇ ವೇಳೆ 17 ಲಕ್ಷ ಕೋಟಿ ರೂ.ಗಳನ್ನು ಸಾಲದ ರೂಪದಲ್ಲಿ ಪಡೆದು, ಅನಂತರ ಅದನ್ನು ಮನ್ನಾ ಮಾಡಿಸಿಕೊಂಡವರ ಪಟ್ಟಿಯನ್ನು ಬಿಡುಗಡೆ ಮಾಡಲಿ. ದೇಶದ ಅಭಿವೃದ್ಧಿ ಕಡೆಗೆ ಒಂದಿಷ್ಟು ಗಮನವಿಲ್ಲ. ಆದರೂ, ಭಾರತ ಮಾತಾಕಿ ಜೈ ಅಂತಾರೆ ಎಂದ ಅವರು, ಕಾಂಗ್ರೆಸ್‌ನವರಿಗೆ ಜೈಕಾರ ಹಾಕುವುದು, ಮುರ್ದಾಬಾದ್ ಹೇಳುವುದು ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ ಎಂದು ದೂರಿದರು.

ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮಾತನಾಡಿ, ಅನರ್ಹ ಶಾಸಕರು ಪಕ್ಷಕ್ಕೆ ದ್ರೋಹ ಬಗೆದು ಮತ್ತೊಂದು ಪಕ್ಷಕ್ಕೆ ಸೇರ್ಪಡೆಯಾದ ಸಂದರ್ಭದಲ್ಲಿ ಅಂದಿನ ಸಭಾಧ್ಯಕ್ಷ ರಮೇಶ್ ಕುಮಾರ್ ಎಲ್ಲರನ್ನೂ ಅನರ್ಹಗೊಳಿಸಿ ಗಂಡಸ್ತನದ ಕೆಲಸ ಮಾಡಿದ್ದಾರೆ ಎಂದು ಅಭಿನಂದಿಸಿದರು.

ಚುನಾವಣೆಗಳ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಹಣ, ಜಾತಿ ಬಲ ಇದ್ದವರಿಗೆ ಮಣೆ ಹಾಕಲಾಗುತ್ತಿದೆ. ಅದರ ಪರಿಣಾಮ ಅಯೋಗ್ಯರು ಆಯ್ಕೆಯಾಗುತ್ತಿದ್ದಾರೆ ಎಂದ ಅವರು, ಕಳೆದ ವಿಧಾನಸಭೆ ಚುನಾವಣೆ ನಂತರ ನಡೆದ ಮೈತ್ರಿಯು ಸರಿಯಾಗಿಲ್ಲ. ನೆರೆ ವಿಷಯದಲ್ಲಿ ಸಿದ್ದರಾಮಯ್ಯ ಮಾತಿನಲ್ಲಿ ಕಾಲ ಕಳೆಯುತ್ತಿರುವುದು ಸರಿಯಲ್ಲ ಎಂದು ನುಡಿದರು.

ಪ್ರಧಾನಿ ನರೇಂದ್ರ ಮೋದಿ ರಾಜ್ಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಲ್ಲ ಪಕ್ಷಗಳ ನಿಯೋಗದೊಂದಿಗೆ ಕೇಂದ್ರದ ಮೇಲೆ ಒತ್ತಡ ತಂದು ಬರ ಹಾಗೂ ನೆರೆ ಪರಿಹಾರ ಪಡೆಯಬೇಕಿತ್ತು. ಆದರೆ, ಇದ್ಯಾವುದೂ ಆಗುತ್ತಿಲ್ಲ. ಬದಲಿಗೆ ದೇಶ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಮುಂದಿನ ಉಪ ಚುನಾವಣೆಯಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಾದರೆ ಕಾಂಗ್ರೆಸ್ 15 ರಲ್ಲಿ ಕನಿಷ್ಠ 14 ಸ್ಥಾನಗಳನ್ನು ಗೆಲ್ಲಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನಪರಿಷತ್ ಸದಸ್ಯ ಎಚ್.ಎಂ.ರೇವಣ್ಣ, ಕುವೆಂಪು ಭಾಷಾ ಭಾರತಿಯ ಮಾಜಿ ಅಧ್ಯಕ್ಷ ಡಾ.ಕೆ.ಮರುಳಸಿದ್ದಪ್ಪ, ಗ್ರಂಥ ಸಂಪಾದಕ ಕಾ ತ ಚಿಕ್ಕಣ್ಣ ಉಪಸ್ಥಿತರಿದ್ದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ತಾವೇ ಸಾಕಿದ ಗಿಣಿಗಳು ಕುಕ್ಕಿದವು. ಆದ ಗಾಯಗಳಿಗೆ ಡ್ರೆಸ್ಸಿಂಗ್ ಆಗಬೇಕಿದೆ. ಅಲ್ಲದೆ, ಅವರು ಚಾಮುಂಡೇಶ್ವರಿಯ ಸೋಲಿನ ಹೊಡೆತದಿಂದ ಹೊರಬರಬೇಕಿದೆ. ಅದೊಂದು ಅಘಾತ, ನಿದ್ದೆಯಲ್ಲಿನ ಒಂದು ಕೆಟ್ಟ ಕನಸು ಎಂದು ಮರೆತುಬಿಡಬೇಕಿದೆ. ಸಿದ್ದರಾಮಯ್ಯರನ್ನು ಕೋಲಾರ ಜಿಲ್ಲೆಯಿಂದ ಸ್ಪರ್ಧಿಸುವಂತೆ ಮನವಿ ಮಾಡಿದ್ದೆ, ಅವರೇ ಬರಲಿಲ್ಲ.

- ಕೆ.ಆರ್.ರಮೇಶ್ ಕುಮಾರ್, ಮಾಜಿ ಸಭಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News